ಕುಶಾಲನಗರ, ಡಿ. 1: ಕುಶಾಲನಗರ ಒಳಚರಂಡಿ ಕಾಮಗಾರಿ ಯನ್ನು ತಕ್ಷಣ ಪೂರ್ಣಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಕುಶಾಲನಗರ ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ. ಸ್ಥಳೀಯ ಸ್ಥಾನೀಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ.
ಈ ಸಂಬಂಧ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ನಗರ ಘಟಕದ ಅಧ್ಯಕ್ಷ ಕೆ.ಜಿ. ಮನು ತಿಳಿಸಿದ್ದಾರೆ.
ಕೆಲವು ವರ್ಷಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಡಿಪೋಗೆ ಭೂಮಿ ನಿಗದಿಯಾಗಿದ್ದು ಈ ಬಗ್ಗೆ ಸಾರಿಗೆ ಸಂಸ್ಥೆ ಮೌನವಹಿಸಿದೆ.
ಈ ಸಂಬಂಧ ಪಕ್ಷದ ವತಿಯಿಂದ ಹೋರಾಟಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಕುಶಾಲನಗರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಮತ್ತು ವಿಶೇಷ ತಹಶೀಲ್ದಾರ್ ಕಛೇರಿಯನ್ನು ತೆರೆಯುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕುಶಾಲನಗರ ಕೇಂದ್ರವಾಗಿರಿಸಿ ಕೊಂಡು ಕಾವೇರಿ ತಾಲೂಕು ರಚನೆಯ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ಪಕ್ಷ ಬೆಂಬಲಿಸುತ್ತಿದ್ದರೂ ಸ್ಥಳೀಯ ಆಡಳಿತ ಪಕ್ಷದ ರಾಜಕಾರಣಿಗಳು ನಾಮಕಾವಸ್ಥೆಯಲ್ಲಿ ಹೋರಾಟ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿತು ಎಂದು ಕೆ.ಜಿ. ಮನು ಮಾಹಿತಿ ನೀಡಿದ್ದಾರೆ.