ನಾಪೋಕ್ಲು, ನ. 29: ಸ್ಥಳೀಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೇತು, ಬಲಮುರಿ, ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕ ಕೊಂಡಿಯಾದ ಮಕ್ಕಿಕಡು ಸೇತುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಸಂಚಾರಕ್ಕೆ ಮುಕ್ತಗೊಳ್ಳುವ ಮುನ್ನವೇ ದ್ವಿಚಕ್ರ ವಾಹನ ಸವಾರರು, ಜೀಪ್ ಚಾಲಕರು ವಾಹನಗಳ ಮೂಲಕ ಸೇತುವೆ ಕ್ರಮಿಸಿ ಬಲಮುರಿ ರಸ್ತೆಗೆ ಸಂಪರ್ಕ ಹೊಂದುತ್ತಿದ್ದು ಗ್ರಾಮಗಳ ನಡುವಿನ ಸಂಪರ್ಕದ ನಿರೀಕ್ಷೆಯಲ್ಲಿರುವ ಗ್ರಾಮೀಣ ಮಂದಿ ಯೋಜನೆ ಪೂರ್ಣಗೊಳ್ಳುವ ಮೊದಲೇ ಕಡಿಮೆ ಅಂತರದ ದಾರಿಯಲ್ಲಿ ಸಾಗಲು ಉತ್ಸುಕರಾಗಿದ್ದಾರೆ.

ಇಲ್ಲಿನ ಬೇತು ಗ್ರಾಮ ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬ್ಬೆ ಹೊಳೆ ಹರಿಯುತ್ತಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿತ್ತು. ನಾಪೋಕ್ಲುವಿನಿಂದ ಬಲಮುರಿ ಗ್ರಾಮಕ್ಕೆ ತೆರಳಲು ಜನರು ಸುತ್ತು ಬಳಸಿ ಸಾಗುತ್ತಿದ್ದರು. ಹೊಳೆ ಸೇತುವೆ ನಿರ್ಮಿಸಿದರೆ ಸಂಪರ್ಕ ಸುಲಭ ಎಂದು ನಿರೀಕ್ಷೆ ಇಟ್ಟುಕೊಂಡ ಮಂದಿ ಇದೀಗ ಕಿರಿದಾದ ದಾರಿಯಲ್ಲಿ ವಾಹನಗಳಲ್ಲಿ ಸಾಗುತ್ತಿದ್ದಾರೆ. ರೂ. ನಲವತ್ತು ಲಕ್ಷ ವೆಚ್ಚದ ಯೋಜನೆಯಡಿ ಸೇತುವೆ ನಿರ್ಮಾಣ ಆರಂಭಗೊಂಡಿತು. ರೂ. 20 ಲಕ್ಷ ಹಣ ಮಂಜೂರಾಗಿದ್ದು, ಹೆಚ್ಚಿನ ಕೆಲಸ ಪೂರ್ಣಗೊಂಡಿದ್ದು, ಇದೀಗ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ನಾಪೋಕ್ಲುವಿನಿಂದ 3 ಕಿ.ಮೀ. ದೂರದಲ್ಲಿ ಮಕ್ಕಿ ಶಾಸ್ತಾವು ದೇವಾಲಯದ ಬಳಿಯಿಂದ ಹಾದುಹೋಗುವ ರಸ್ತೆ ಮಕ್ಕಿಕಡು ಎಂಬಲ್ಲಿ ಕೊನೆಗೊಳ್ಳುತ್ತದೆ. ಅತ್ತ ಪಾರಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಸೇತುವೆ ನಿರ್ಮಾಣಗೊಂಡಲ್ಲಿ 3 ಕಿ.ಮೀ. ಕ್ರಮಿಸಿ ಪಾರಾಣೆ ಹಾಗೂ ಬಲಮುರಿ ಗ್ರಾಮಗಳನ್ನು ತಲುಪಬಹುದಾಗಿದೆ. ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣವಾದ ನಾಪೋಕ್ಲು ಶೀಘ್ರಗತಿಯ ಬೆಳವಣಿಗೆಯನ್ನು ಕಾಣುತ್ತಿದೆ. ವ್ಯಾಪಾರ, ವಹಿವಾಟು ಕಂದಾಯ ಇಲಾಖೆಯ ಕೆಲಸಕಾರ್ಯಗಳಿಗೆ ಗ್ರಾಮೀಣ ಮಂದಿ ಬಲಮುರಿ ಅಥವಾ ಪಾರಾಣೆ ಮೂಲಕ ಸಾಗಿ ಬರಬೇಕಿತ್ತು. ಬಸ್ಸಿನ ಸೌಕರ್ಯವೂ ಕಡಿಮೆ. ಹಾಗೂ ಕ್ರಮಿಸುವ ಅಂತರ ಜಾಸ್ತಿ ಇದ್ದು ಜನ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಸೇತುವೆ ನಿರ್ಮಾಣಗೊಂಡಲ್ಲಿ ಎಂಟರಿಂದ ಹತ್ತು ಕಿ.ಮೀ. ಅಂತರ ಕಡಿಮೆ ಯಾಗಲಿದೆ. ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಅನುಕೂಲ. - ದುಗ್ಗಳ ಸದಾನಂದ