ಮಡಿಕೇರಿ, ನ. 29: ತಾ. 30ರಿಂದ (ಇಂದಿನಿಂದ) ಎಲ್ಲಾ ಪೊಲೀಸ್ ಠಾಣೆಯಲ್ಲಿ ಸ್ವಾಗತಕಾರ, ಸ್ವಾಗತಗಾರ್ತಿಯರನ್ನು ನೇಮಿಸಿ, ಪೊಲೀಸ್ ಠಾಣೆಗೆ ಬರುವ ಎಲ್ಲಾ ನೊಂದವರು, ದೂರುದಾರರೊಂದಿಗೆ ಸಹಾನುಭೂತಿಯಿಂದ ಸ್ಪಂದಿಸುವ ಕಾರ್ಯವನ್ನು ಪ್ರಾರಂಭಿಸುತ್ತಿರುವ ದಾಗಿ ಹಾಗೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಈಗಾಗಲೇ ಈ ಸಂಬಂಧ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ “ಜನ ಸ್ನೇಹಿ ಪೊಲೀಸ್” ಎಂಬ ಉಪವಿಭಾಗ ಮಟ್ಟದ ಕಾರ್ಯಾಗಾರ ವನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ನಡೆಸಲಾಗಿದೆ. ಠಾಣೆಗೆ ಆಗಮಿಸುವ ದೂರುದಾರರು ಹಾಗೂ ಸಾರ್ವಜನಿಕರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವ ಬಗೆಗಿನ ತರಬೇತಿ ಇದಾಗಿರುತ್ತದೆ.

ಈ ಕಾರ್ಯಾಗಾರದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಒಳಗೊಂಡಂತೆ ನಾಲ್ಕು ತಂಡಗಳನ್ನಾಗಿ ರಚಿಸಿ, ಸಾರ್ವಜನಿಕರೊಂದಿಗೆ ನಡೆದು ಕೊಳ್ಳಬೇಕಾದ ರೀತಿ, ಸುಧಾರಿತ ಗಸ್ತು ವ್ಯವಸ್ಥೆ, ಮಾಹಿತಿ ಕಲೆ ಹಾಕುವಿಕೆಗೆ ಸಂಬಂಧಿಸಿದಂತೆ ಪ್ರಾತ್ಯಕಿಕೆಗಳನ್ನು ಮಾಡುವ ಜವಾಬ್ದಾರಿಯನ್ನು ನೀಡಿದು,್ದ ಉತ್ತಮವಾದ ಪ್ರಾತ್ಯಕ್ಷಿಕೆ ಮಾಡಿದ ತಂಡಕ್ಕೆ ಬಹುಮಾನವನ್ನು ವಿತರಿಸಲಾಗಿದೆ.

ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು ಭಾಗವಹಿಸಿ ಪೊಲೀಸ್ ಹಾಗೂ ಸಾರ್ವಜನಿಕರ ಬಾಂಧವ್ಯ ವೃದ್ಧಿಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.