ಮೂರ್ನಾಡು, ನ. 29: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಯಿಂದ ಭಯದ ವಾತಾವರಣದೊಂದಿಗೆ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿ ಗಳು ಸಮಸ್ಯೆ ವ್ಯಕ್ತಪಡಿಸಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಮಕ್ಕಳ ಗ್ರಾಮ ಸಭೆಯಲ್ಲಿ ಮೂರ್ನಾಡು ಪ್ರಾಥಮಿಕ ಶಾಲೆ ವಿದ್ಯಾರ್ಥಿ ದರ್ಶನ್ ಮನವಿ ಮಾಡಿದರು. ಈಗಾಗಲೇ ಒಂದು ಬಾರಿ ಗ್ರಾಮ ಪಂಚಾಯಿತಿಯಿಂದ ನಾಯಿಗಳನ್ನು ಹಿಡಿಯಲಾಗಿದೆ. ಮುಂದಿನ ದಿನದಲ್ಲಿ ಒಮ್ಮೆ ನಾಯಿ ಹಿಡಿಯುವ ಕಾರ್ಯಕ್ರಮವನ್ನು ಕೈಗೊಂಡು ನಿಯಂತ್ರಣಗೊಳಿ ಸುವದಾಗಿ ಪಿಡಿಓ ವೇಣು ಗೋಪಾಲ್ ಉತ್ತರಿಸಿದರು. ಸರಕಾರಿ ಪ್ರೌಢಶಾಲೆ ರಸ್ತೆಯಲ್ಲಿ ಅಲ್ಲಿನ ನಿವಾಸಿಗಳು ಮನೆಗಳಿಂದ ಕಸಗಳನ್ನು ತಂದು ರಸ್ತೆ ಬದಿ ಸುರಿಯುತ್ತಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮಾನಸ ಆರೋಪಿಸಿದರು. ಇದರತ್ತ ಗಮನ ಹರಿಸಿ ಮುಂದೆ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಭರವಸೆ ನೀಡಿದರು. ಬಾಡಗ, ಮೂರ್ನಾಡು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮನವಿಯನ್ನು ಮಾಡಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅಧ್ಯಕ್ಷತೆ ವಹಿಸಿದರು. ಮಡಿಕೇರಿ ವಕೀಲೆ ಮೀನಾ ಕುಮಾರಿ ಮಕ್ಕಳ ಮೇಲಿನ ದೌರ್ಜನ್ಯ, ರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ, ಸದಸ್ಯರು, ಬಿಸಿಎಂ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ಎನ್.ಎನ್. ವೀರಣ್ಣ ಹಾಜರಿದ್ದರು. ಗ್ರಾಮ ಪಂಚಾಯಿತಿ ಪಿಡಿಓ ವೇಣು ಗೋಪಾಲ್ ಮಕ್ಕಳ ಗ್ರಾಮ ಸಭೆ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.