ಗೋಣಿಕೊಪ್ಪ ವರದಿ, ನ. 30: ಜೇನು ಕೃಷಿಯಲ್ಲಿ ರೈತರು ತೊಡಗಿಸಿಕೊಳ್ಳುವದರಿಂದ ಶೇ. 33 ರಷ್ಟು ಕಾಫಿ ಇಳುವರಿಯನ್ನು ಹೆಚ್ಚಿಸಿ ಕೊಳ್ಳಬಹುದು ಎಂದು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಮುಖ್ಯಸ್ಥ ಡಾ. ಸಿ.ಜೆ. ಕುಶಾಲಪ್ಪ ಹೇಳಿದರು.

ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಭತ್ತದ ಬೆಳೆಯ ಕ್ಷೇತ್ರೋತ್ಸವ ಹಾಗೂ ಸಮಗ್ರ ಕೃಷಿ ಪದ್ಧತಿಗಳ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಜೇನು ಕೃಷಿ ರೈತರಿಗೆ ಅದಾಯ ಹೆಚ್ಚಿಸುವ ಕೆಲಸ ಮಾಡಲಿದೆ ಮತ್ತು ಕಾಫಿ ಬೆಳೆಯುವ ಪ್ರದೇಶಗಳಷ್ಟು ಒಳ್ಳೆಯ ಜಾಗ ಬೇರೆ ಯಾವ ರಾಷ್ಟ್ರದಲ್ಲಿ ಸಿಗುವದಿಲ್ಲ. ಆದ್ದರಿಂದ ಇಲ್ಲಿನ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ವಿವಿಧ ತಳಿಯ ಭತ್ತದ ಬೆಳೆಯ ಕ್ಷೇತ್ರವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಎಂ.ಕೆ. ನಾಯಕ್, ರೈತರು ತಮ್ಮ ಅದಾಯವನ್ನು ದ್ವಿಗುಣ ಗೊಳಿಸಲು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಭತ್ತದ ಬೆಳೆಯ ಕ್ಷೇತ್ರೋತ್ಸವ ಹಾಗೂ ಸಮಗ್ರ ಕೃಷಿ ಪದ್ಧತಿಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಾಯಕ ಮಹಾ ನಿರ್ದೇಶಕ ಎಸ್. ಬಾಸ್ಕರ್, ಹವಾಗುಣ ವೈಪರಿತ್ಯಕ್ಕೆ ಮರಗಳ ಕೊರತೆ ಅಧಿಕವಾಗಿರುವದೇ ಕಾರಣ. ಮತ್ತು ಕೃಷಿ ಪದ್ಧತಿ ಜೊತೆ ಪೌಷ್ಟಿಕ ಪದ್ಧತಿಗಳನ್ನು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡ ಕೆ.ಎಸ್. ರಾಜೀವ್ ಮತ್ತು ಪುಟ್ಟಂಗಡ ರೋಹಿಣಿ ಸುಬ್ಬಯ್ಯ ಅವರುಗಳನ್ನು ಸನ್ಮಾನಿಸಲಾಯಿತು. ಸಮಗ್ರ ಕೃಷಿಯ ಬಗ್ಗೆ ರೈತರು ವಿಜ್ಞಾನಿಗಳೊಂದಿಗೆ ಚರ್ಚಿಸಿ ಮಾಹಿಯನ್ನು ಪಡೆದು ಕೊಂಡರು ಮತ್ತು ಸಾಂಕೇತಿಕವಾಗಿ ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಾಯಕ ಮಹಾ ನಿರ್ದೇಶಕ ಎಸ್. ಭಾಸ್ಕರ್ ರೈತರಿಗೆ ಜೇನು ಪೆಟ್ಟಿಗೆಯನ್ನು ವಿತರಿಸಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಮುಖ್ಯಸ್ಥ ಪಿ. ನಾರಾಯಣಸ್ವಾಮಿ ಉದ್ಘಾಟಿಸಿದರು. ಕೃಷಿ ಇಲಾಖೆ ವತಿಯಿಂದ ವಿತರಿಸುವಂತಹ ಉಪಕರಣಗಳು, ವಿವಿಧ ಭತ್ತದ ತಳಿಗಳು, ಟಾರ್ಪಲ್‍ಗಳು ಮತ್ತು ಎರೆಗೊಬ್ಬರ ಪ್ರದರ್ಶನಗೊಂಡವು.

ಓಮೇಗಾ ಆಟೋಮೊಬೈಲ್ಸ್ ವತಿಯಿಂದ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವಂತಹ ಉಪಕರಣಗಳು, ಪೊನ್ನಂಪೇಟೆ ಅರಣ್ಯ ಇಲಾಖೆ ವತಿಯಿಂದ ವಿವಿಧ ಅರಣ್ಯ ಸಸಿಗಳನ್ನು ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಸುಧಾರಿತ ಭತ್ತದ ತಳಿಗಳು, ಬೆಂಕಿ ರೋಗ ನಿರೋಧಕ ಹೊಸ ತಳಿಗಳ ಪರಿಚಯ ಮತ್ತು ಪ್ರತ್ಯಕ್ಷಿತೆ, ಎರೆಗೊಬ್ಬರ ತಯಾರಿಕೆ ಮತ್ತು ಬಯೋಡೈಜಿಸ್ಟರ್, ಮೀನು ಮತ್ತು ಹಂದಿ ಸಾಕಣಿಕೆ, ವೈಜ್ಞಾನಿಕ ಜೇನು ಕೃಷಿ, ಕೃಷಿ ಅರಣ್ಯ ಪದ್ಧತಿ, ಆರ್ಕಿಡ್ ಪುಪ್ಪ ಬೇಸಾಯ ಪದ್ಧತಿಯನ್ನು ವೀಕ್ಷಿಸಲು ಮಹಿಳೆಯರು ಆಗಮಿಸಿ ಮಾಹಿತಿಯನ್ನು ಪಡೆದುಕೊಂಡರು. ಮತ್ತು ಸಂರಕ್ಷಿತ ತರಕಾರಿ ಕೃಷಿ, ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ, ಜೈವಿಕ ಇಂಧನ ಉತ್ಪಾದನೆಯ ಪ್ರಾತ್ಯಕ್ಷಿಕೆ ಮತ್ತು ಜೈವಿಕ ಇಂಧನ ಬಳಸಿ ಟ್ರ್ಯಾಕ್ಟರ್ ಚಾಲನೆಯ ಪ್ರಾತ್ಯಕ್ಷಿಕೆ, ರೈತ-ವಿಜ್ಞಾನಿಗಳ ವಿಚಾರ ವಿನಿಮಯ, ವಿವಿಧ ಇಲಾಖೆಗಳ ಹಾಗೂ ಸಂಸ್ಥೆಗಳ ಬೀಜ, ಗೊಬ್ಬರ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ನಡೆಯಿತು.

ಈ ಸಂದರ್ಭ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಟಿ.ಹೆಚ್. ಗೌಡ, ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆ. ರಾಮಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಪಿ. ದೇವಕಿ, ಕೃಷಿ ಸಮಾಜ ಅಧ್ಯಕ್ಷ ಮಾಚೆಟ್ಟಿರ ಚೋಟು ಕಾವೇರಪ್ಪ ಇದ್ದರು.