ಗೋಣಿಕೊಪ್ಪ ವರದಿ, ನ. 29: ಮಕ್ಕಳ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಹಕ್ಕಿನ ಬಗ್ಗೆ ಜಾಗೃತಿ ವಹಿಸಬೇಕೆಂದು ವೀರಾಜಪೇಟೆ ಎರಡನೇ ಅಡಿಷ್‍ನಲ್ ನ್ಯಾಯಾ ಧೀಶ ಮೋಹನ್ ಪ್ರಭು ಪೊಲೀಸರಿಗೆ ಸಲಹೆ ನೀಡಿದರು.

ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಪೊಲೀಸ್ ಉಪವಿಭಾಗ ಆಯೋಜಿಸಿದ್ದ ಜನಸ್ನೇಹಿ ಪೊಲೀಸ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದ 15 ರ ಪರಿಚ್ಚೇದದಂತೆ ಎಲ್ಲರಿಗೂ ಜೀವಿಸುವ ಹಕ್ಕಿದೆ.

ಪೊಲೀಸ್ ಠಾಣೆಗೆ ಪತಿ, ಪತ್ನಿ ಸಂಬಂಧಪಟ್ಟಂತೆ ದೂರು ನೀಡಲು ಬಂದಾಗ ಸಮಾಲೋಚನೆ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದರು.

ಸುಪ್ರಿಂ ಕೋರ್ಟ್‍ನ ಆದೇಶ ದಂತೆ ದೂರು ದಾಖಲು ಮಾಡದೆ ಅವರಿಬ್ಬರಲ್ಲಿ ಪರಸ್ಪರ ವಿಶ್ವಾಸ ಗಳಿಸುವಂತ ಸಮಾಲೋಚನೆ ನಡೆಸಬೇಕು. ದೂರುದಾರರು ಠಾಣೆಗೆ ದೂರು ನೀಡಿದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸ ಬೇಕೆಂದರು.

ತಾಂತ್ರಿಕ ಯುಗದಲ್ಲಿ ಪೊಲೀಸರಿಗೆ ತಮ್ಮ ಕರ್ತವ್ಯ ಹಾಗೂ ಪ್ರಜ್ಞೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುವದು ಒಳ್ಳೆಯದೆಂದು ವೀರಾಜಪೇಟೆ ಸೀನಿಯರ್ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ 40 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪ್ರಮಾಣ ಪತ್ರ ಪಡೆದರು.

ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್, ತಾಲೂಕು ದಂಡಾಧಿಕಾರಿ ಗೋವಿಂದರಾಜು ಉಪಸ್ಥಿತರಿದ್ದರು.

ವೀರಾಜಪೇಟೆ ಉಪ ಅಧೀಕ್ಷಕ ನಾಗಪ್ಪ ಸ್ವಾಗತಿಸಿದರು. ಪೊನ್ನಂ ಪೇಟೆ ಉಪನೀರಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಗೋಣಿಕೊಪ್ಪ, ವೀರಾಜಪೇಟೆ ವೃತ್ತ ನಿರೀಕ್ಷಕರುಗಳಾದ ದಿವಾಕರ್, ಕುಮಾರ್ ಆರಾದ್ಯ, ಪೊಲೀಸ್ ಉಪನಿರೀಕ್ಷಕರುಗಳಾದ ರಾಜು, ಸಿದ್ದಯ್ಯ, ಸುರೇಶ್ ಬೋಪಣ್ಣ ಈ ಸಂದರ್ಭ ಹಾಜರಿದ್ದರು.