ಕುಶಾಲನಗರ, ನ. 30: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ಸಿಎಂಐ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಫಾ. ಡಾ. ವರ್ಗೀಸ್ ಹೇಳಿದರು.
ಸ್ಥಳೀಯ ಭಾರತಮಾತಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ವಿಭಾಗಗಳ ಅಂತರ್‍ಜಿಲ್ಲಾ ಮಟ್ಟದ ಕ್ರೀಡಾಕೂಟ ವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರ ಬದಿಗೊತ್ತಿ ಕ್ರೀಡಾ ಮನೋಭಾವ ಹಾಗೂ ಉತ್ಸಾಹ ದಿಂದ ಪಾಲ್ಗೊಳ್ಳಬೇಕೆಂದರು.
ಸಂಸ್ಥೆ ಕಾರ್ಯದರ್ಶಿ ಜೋಸೆಫ್ ಫಿಲಿಪ್, ಭಾರತಮಾತಾ ಶಾಲಾ ಪ್ರಾಂಶುಪಾಲ ಜೋಸೆಫ್, ಪ್ರತೀಶ್, ರೆನಿ, ಜಾರ್ಜ್, ಸೆಬಾಸ್ಟಿಯನ್, ಜಿನೋಶ್ ಮತ್ತಿತರರು ಇದ್ದರು.
ಶನಿವಾರಸಂತೆ, ಪಿರಿಯಾ ಪಟ್ಟಣ, ಹುಣಸೂರು, ತಾಂಡವ ಪುರ, ಮೈಸೂರು, ಹಾಸನ, ಅರಕಲ ಗೂಡು, ಗೋಣಿಕೊಪ್ಪ ಶಾಲೆಗಳಿಂದ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.
ವಾಲಿಬಾಲ್ ಪಂದ್ಯಾಟದಲ್ಲಿ ಭಾರತಮಾತಾ ತಂಡ ಪ್ರಥಮ, ಅರಕಲಗೂಡಿನ ಕ್ರಿಸ್ತಜ್ಯೋತಿ ದ್ವಿತೀಯ, ಥ್ರೋಬಾಲ್‍ನಲ್ಲಿ ಗೋಣಿಕೊಪ್ಪ ತಂಡ ಪ್ರಥಮ, ಮೈಸೂರಿನ ಬೋಗಾದಿಯ ಕ್ರೈಸ್ಟ್ ತಂಡ ದ್ವಿತೀಯ ಬಹುಮಾನ ಪಡೆದವು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾಟದಲ್ಲಿ ಪಿರಿಯಾ ಪಟ್ಟಣದ ಪುಷ್ಪಾ ಕಾನ್ವೆಂಟ್ ಪ್ರಥಮ, ಭಾರತಮಾತ ದ್ವಿತೀಯ ಸ್ಥಾನ ಪಡೆಯಿತು.