ವೀರಾಜಪೇಟೆ, ನ. 29: ಮನುಷ್ಯನ ಪ್ರತಿ ಹಂತದ ಬದುಕಿನಲ್ಲಿ ಕಾನೂನುಗಳ ಅರಿವಿನ ಅಗತ್ಯ ವಿರುವದರಿಂದ ತಾಲೂಕು ಕಾನೂನು ಸೇವೆಗಳ ಸಮಿತಿ ವತಿ ಯಿಂದ ಬಡವರು ಕಡು ಬಡವರು ನಿರ್ಗತಿಕರು, ಮಹಿಳೆಯರು ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ಉಚಿತ ಕಾನೂನು ಅರಿವು ನೀಡಲಾಗುತ್ತಿದ್ದು ಪ್ರತಿಯೊಬ್ಬರು ಇದರ ಸದುಪ ಯೋಗವನ್ನು ಪಡೆದುಕೊಳ್ಳು ವಂತಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ್ ಲಕ್ಷ್ಮಣ ಅಂಚಿ ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಐಕ್ಯತ ಸಪ್ತಾಹ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕೊಡಗು ಮಹಿಳಾ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ‘ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಂಘಗಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶಿವಾನಂದ್ ಲಕ್ಷ್ಮಣ ಅಂಚಿ ಮಾತನಾಡಿದರು.

ಮಹಿಳೆಯ ಬದುಕಿನಲ್ಲಿ ವ್ಯಾಜ್ಯಗಳು ನಡೆದು ಹೇಳಿಕೊಳ್ಳಲು ಸಾಧ್ಯವಾಗದಿದ್ದಾಗ ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಲ್ಲಿ ನ್ಯಾಯಾಲಯ ಮೊದಲಿಗೆ ರಾಜಿ ಪ್ರಯತ್ನ ನಂತರ ವಿಚಾರ ನಡೆಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸ ಲಾಗುವದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ಕಲ್ ಇನ್ಸ್‍ಪ್ಯೆಕ್ಟರ್ ಎನ್. ಕುಮಾರ್ ಆರಾಧ್ಯ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರು ಮಹಿಳೆಗೆ ಗೌರವ ನೀಡುವಂತಾಗಬೇಕು. ಹಿಂದಿನ ದಿನಗಳಿಗಿಂತ ಮಹಿಳೆ ಇಂದು ಸಂಘಟನೆಯ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿರುವದು ಶ್ಲಾಘನೀಯ, ಆದರೆ ಮಹಿಳೆ ವಿರುದ್ಧ ದೌರ್ಜನ್ಯಗಳು ನಡೆಯು ವದನ್ನು ಮೊದಲು ಹೋಗಲಾಡಿಸ ಬೇಕು ಎಂದರು.

ಅತಿಥಿಗಳಾಗಿದ್ದ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ಸ್ವಾತಂತ್ರ್ಯ ಬಂದು 70 ವರ್ಷಗಳಾದರು ಪುರುಷನ ದಬ್ಬಾಳಿಕೆಯಿಂದ ಮಹಿಳೆಗೆ ಸರಿಯಾದ ಸ್ಥಾನಮಾನ ದೊರಕುತಿಲ್ಲ. ಸರಕಾರಗಳು ಮಹಿಳೆಗಾಗಿ ಅನೇಕ ಕಾನೂನು ಗಳನ್ನು ಜಾರಿಗೆ ತಂದರೂ ದೌರ್ಜನ್ಯ, ಶೋಷಣೆಗಳು ಕಡಿಮೆಯಾಗಿಲ್ಲ. ಮೀಸಲಾತಿ ಪ್ರಕಾರ ಮಹಿಳೆಗೆ ಎಲ್ಲಾ ಸೌಲಭ್ಯಗಳು ದೊರಕುವಂತಾಗಬೇಕು ಎಂದರು.

ಮಹಿಳಾ ಸಮಾಜದ ಅಧ್ಯಕ್ಷೆ ಕುಸುಮ ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲೆ ಹಾಜಿರಾ ಶರೀಫ್ ತಮ್ಮ ಉಪನ್ಯಾಸದಲ್ಲಿ ಮಹಿಳೆ ಪ್ರಜ್ಞಾವಂತರಾಗಲು ಕಾನೂನಿನ ಅರಿವು ಅಗತ್ಯ. ಇದರಿಂದ ಜೀವನ ದಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು. ವೇದಿಕೆಯಲ್ಲಿದ್ದ ಆಪ್ತ ಸಮಾಲೋಚಕಿ ಐ.ಎಂ. ಕಾವೇರಮ್ಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.