*ಸಿದ್ದಾಪುರ, ನ. 30: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಗೊಳಪಡುವ ಪ್ರವಾಸೀ ತಾಣ ದುಬಾರೆಯಲ್ಲಿ ರ್ಯಾಫ್ಟಿಂಗ್ ಅಸೋಸಿಯೇಷನ್ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿ ಕೊಂಡಿ ರುವದಲ್ಲದೆ, ಪಂಚಾಯಿತಿ ವಿರುದ್ಧವೇ ದೂರು ದಾಖಲಿಸಿರು ವದನ್ನು ವಿರೋಧಿಸಿ, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾ.ಪಂ. ಆಡಳಿತ ಮಂಡಳಿಯೇ ಧರಣಿ ಕುಳಿತ ಪ್ರಸಂಗ ಇಂದು ನಡೆಯಿತು.

ದುಬಾರೆ ವ್ಯಾಪ್ತಿಯಲ್ಲಿ ರ್ಯಾಫ್ಟಿಂಗ್ ನಡೆಸುತ್ತಿರುವವರು ಪಂಚಾಯಿತಿ ಅನುಮತಿಯಿಲ್ಲದೆ ಕಟ್ಟಡ ನಿರ್ಮಿಸಿಕೊಂಡಿದ್ದು, ಇದನ್ನು ತೆರವುಗೊಳಿಸುವಂತೆ ಗ್ರಾ.ಪಂ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಂಚಾಯಿತಿ ವತಿಯಿಂದ ಬೀಗ ಹಾಕಲಾಗಿತ್ತು. ಆದರೆ, ಅಸೋಸಿಯೇಷನ್‍ನವರು ಬೀಗ ಒಡೆದುದಲ್ಲದೆ, ಪಂಚಾಯಿತಿ ವಿರುದ್ಧವೇ ಕುಶಾಲನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದಲ್ಲದೆ ರ್ಯಾಫ್ಟಿಂಗ್ ನಡೆಸುತ್ತಿರು ವವರು ತಮ್ಮ ಮನೆ ಎದುರುಗಡೆ ಪ್ರವಾಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿದ್ದು, ಈ ಬಗ್ಗೆ ವಾಹನ ನಿಲುಗಡೆ ಗುತ್ತಿಗೆ ಪಡೆದುಕೊಂಡವರು ಪಂಚಾಯಿತಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪಂಚಾಯಿತಿ ಯಿಂದ ಮನೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಾರ ದೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಅಸೋಸಿಯೇಷನ್‍ನವರು ಇದನ್ನು ಲೆಕ್ಕಿಸದೆ ತಮ್ಮ ಚಟುವಟಿಕೆ ಮುಂದುವರಿಸಿರುವದರಿಂದ ಇಂದು ಗ್ರಾ.ಪಂ. ಅಧ್ಯಕ್ಷರಾದಿಯಾಗಿ ಸದಸ್ಯರು ಪಂಚಾಯಿತಿಯಲ್ಲಿ ಮೌನ ಧರಣಿ ಕುಳಿತರು. ಸ್ಥಳಕ್ಕೆ ಕಾರ್ಯನಿರ್ವಹಣಾಧಿಕಾರಿ ಬರುವಂತೆ ಪಟ್ಟು ಹಿಡಿದರು.

ಸಂಜೆ 5 ಗಂಟೆ ವೇಳೆಗೆ ಆಗಮಿಸಿದ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಅವರು ಈ ಬಗ್ಗೆ ನಾಳೆ ಪರಿಶೀಲಿಸಿ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದ ಬಳಿಕ ಧರಣಿ ಹಿಂತೆಗೆದುಕೊಳ್ಳಲಾಯಿತು.

ಧರಣಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಜೈನಭ, ಉಪಾಧ್ಯಕ್ಷೆ ಕುಮಾರಿ, ಸದಸ್ಯರುಗಳಾದ ಕೋಟುಮಾಡ ನವೀನ್, ಅಯ್ಯಂಡ್ರ ಲೋಕನಾಥ್, ಟಿ.ಕೆ. ಸುಧೀರ್, ಪೆಮ್ಮಯ್ಯ, ಚಂದ್ರವತಿ ಪಾಲ್ಗೊಂಡಿದ್ದರು.

-ಸುಧಿ