ವೀರಾಜಪೇಟೆ, ನ. 30: ಕೊಡಗು ಜಿಲ್ಲೆಯಲ್ಲಿರುವ ತುಳು ಬಾಷಿಕರ ಸಂಘಟನೆಯನ್ನು ಗ್ರಾಮೀಣ ಮಟ್ಟದಿಂದ ಸಂಘಟಿಸಿ 13 ತುಳು ಭಾಷೆಯ ಬಾಂಧವರನ್ನು ಒಂದುಗೂಡಿಸಿ ಜಿಲ್ಲಾ ಕೇಂದ್ರದಲ್ಲಿ ತುಳು ಸಮ್ಮೇಳನ ನಡೆಸಲಾಗುವದು ಎಂದು ತುಳುವೆರ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎ.ರವಿ ಹೇಳಿದರು.
ತುಳುವೆರ ಜನಪದ ಕೂಟದ ವತಿಯಿಂದ ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ತುಳುವೆರ ಕೂಟದ ಸಭೆಯಲ್ಲಿ ಭಾಗವಹಿಸಿದ್ದ ಪಿ.ಎಂ. ರವಿ ಅವರು ಮಾತನಾಡಿ ತುಳುವೆರ ಸಮುದಾಯ ಬಾಂಧವರು ನಮ್ಮ ಸಂಸ್ಕøತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆಯ ಮುಖಾಂತರ ಸೌಲಭ್ಯಗಳನ್ನು ಪಡೆಯುವದರೊಂದಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.
ತುಳುವೆರ ಜನಪದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶೇಖರ ಭಂಡಾರಿ ಮಾತನಾಡಿ, ತುಳು ಬಾಂಧವರ ಅಭಿವೃದ್ಧಿಗಾಗಿ ತುಳು ಸಂಘ ಮಾಡಲಾಗಿದ್ದು, ತುಳು ಜನಾಂಗದ ಪ್ರತಿಯೊಬ್ಬರು ಸದಸ್ಯತ್ವವನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು. ತುಳುವೆರ ಕೂಟದ ಜಿಲ್ಲಾ ಸಲಹೆಗಾರ ಎಂ.ಡಿ. ನಾಣಯ್ಯ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ತುಳು ಬಾಷಿಕರನ್ನು ಗುರುತಿಸಿ ಅವರಿಗೆ ಜನಪದ ಕೂಟದಿಂದ ಪ್ರೋತ್ಸಾಹ ನೀಡುವಂತಾಗಬೇಕು ಎಂದರು. ಈ ಸಂದರ್ಭ ಜಿಲ್ಲಾ ಮಟ್ಟದ ತುಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದ ಅಪೇಕ್ಷ ರೈ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತುಳುವೆರ ಜನಪದ ಕೂಟದ ತಾಲೂಕು ಅಧ್ಯಕ್ಷ ದಾÀಮೋದರ ಅಚಾರ್ಯ ವಹಿಸಿ ಮಾತನಾಡಿ ತುಳು ಬಾಂಧವರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುವದಾಗಿ ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಒಕ್ಕೂಟದ ಚಂದ್ರಶೇಖರ್, ಮರಗೊಡು ವಲಯದ ಅಧ್ಯಕ್ಷ ವೇಣು ಗೋಪಾಲ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ವಿಜಯ ಲಕ್ಷ್ಮಿ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಜಿಲ್ಲಾ ಖಜಾಂಚಿ ಮುಕುಂದ, ಸೋಮವಾರಪೇಟೆ ಸಂಚಾಲಕ ಸತೀಶ್ ಕುಂದರ್, ವೀರಾಜಪೇಟೆ ಪ್ರಧಾನ ಕಾರ್ಯದರ್ಶಿ ಬಿ.ಜಿ. ಸುರೇಶ್ ನಾಯಕ್ ಇತರರು ಉಪಸ್ಥಿತರಿದ್ದರು. ಹೆಚ್.ಎ. ಸನ್ನಿ ಅವರು ಸ್ವಾಗತಿಸಿ, ವಂದಿಸಿದರು.