ಸೋಮವಾರಪೇಟೆ, ನ. 30: ಅಕ್ರಮ-ಸಕ್ರಮ ಯೋಜನೆ ಸೇರಿದಂತೆ 94 ಸಿ ಹಾಗೂ 94 ಸಿಸಿ ಅಡಿಯಲ್ಲಿ ಮಂಜೂರಾದ ಜಾಗವನ್ನು ಫಲಾನುಭವಿಗಳು ಯಾವದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಅಕ್ರಮ-ಅಕ್ರಮ ಹಾಗೂ 94 ಸಿ ಅಡಿಯಲ್ಲಿ ಜಾಗ ಮಂಜೂರಾದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ. ಅರಣ್ಯ ಪ್ರದೇಶವನ್ನು ಹೊರತುಪಡಿಸಿದಂತೆ ಇತರ ಜಾಗಗಳಲ್ಲಿ ಮನೆ ನಿರ್ಮಿಸಿ ಕೊಂಡಿರುವ ಸಾರ್ವಜನಿಕರಿಗೆ ಹಕ್ಕುಪತ್ರಗಳನ್ನು ವಿತರಿಸಲು ಇದ್ದಂತಹ ತೊಡಕು ನಿವಾರಣೆಯಾಗಿದೆ. ಈ ಹಿನ್ನೆಲೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ಕೆ ವೇಗ ದೊರೆಯಲಿದೆ ಎಂದು ರಂಜನ್ ತಿಳಿಸಿದರು.

ಅಕ್ರಮ-ಸಕ್ರಮ ಅಡಿಯಲ್ಲಿ ತಾಲೂಕಿನಲ್ಲಿ 6 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡಿ ರುವವರು 94 ಸಿ ಮತ್ತು 94 ಸಿ.ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ 5 ತಿಂಗಳ ಒಳಗೆ ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡಲಾಗುವದು. ಈ ಹಿಂದೆ 2012ಕ್ಕೂ ಮುಂಚಿತವಾಗಿ ಮನೆ ಕಟ್ಟಿಕೊಂಡವರಿಗೆ ಮಾತ್ರ ಹಕ್ಕುಪತ್ರ ನೀಡಲಾಗುವದು ಎಂಬ ನಿಯಮ ಇದ್ದುದ್ದನ್ನು ಬದಲಾಯಿಸಿ 2015 ರವರೆಗೆ ವಿಸ್ತರಣೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಂಜನ್ ಹೇಳಿದರು.

94 ಸಿ ಅಡಿಯಲ್ಲಿ 50 ಫಲಾನುಭವಿಗಳು ಹಾಗೂ ಅಕ್ರಮ-ಸಕ್ರಮ ಅಡಿಯಲ್ಲಿ 15 ಫಲಾನುಭವಿಗಳಿಗೆ ಶಾಸಕ ರಂಜನ್, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಹೆಚ್.ಸಿ. ನಾಗೇಶ್, ಫಿಲೋಮಿನಾ ಹಕ್ಕುಪತ್ರ ವಿತರಿಸಿದರು.