ಗೋಣಿಕೊಪ್ಪಲು, ನ. 30: ನಾವು ಇಂದು ಸೇವಿಸುವ ಆಹಾರ ಪದಾರ್ಥಗಳು ವಿಷಕಾರಿ ಯಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿದೆ. ನಾವೇ ಬೆಳೆದ ಭತ್ತ, ಸೊಪ್ಪು ತರಕಾರಿಯನ್ನು ಬಳಸಿದ್ದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಸಾಧ್ಯವಿದೆ ಎಂದು ಪ್ರಗತಿಪರ ಕೃಷಿಕ, ರಾಜ್ಯ ಕೃಷಿ ಪ್ರಶಸ್ತಿ ವಿಜೇತ ಸೋಮೆಂಗಡ ಗಣೇಶ್ ತಿಮ್ಮಯ್ಯ ಹಿತವಚನ ನುಡಿದಿದ್ದಾರೆ.

ಇಲ್ಲಿಗೆ ಸಮೀಪ ಪೆÇನ್ನಪ್ಪಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಗೋಣಿಕೊಪ್ಪಲು ಕಾವೇರಿ ಪ.ಪೂ.ಕಾಲೇಜು ವಾರ್ಷಿಕ ಎನ್‍ಎಸ್‍ಎಸ್ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಲ್ಲೂರುವಿನಲ್ಲಿ ಭತ್ತದ ಕೃಷಿಕರಾಗಿದ್ದು, ಆರೋಗ್ಯ ವೃದ್ಧಿಗೆ ಕಾರಣವಾದ ದುಬಾರಿ ದರದ (ರೂ. 150/ ಕೆ.ಜಿ.) ‘ನವರ’ ಭತ್ತ ಉತ್ಪಾದನೆಯೊಂದಿಗೆ ತಾನೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಉತ್ತಮ ಇಳುವರಿ ಸಿಗುತ್ತಿದೆ. ಕೊಡಗಿನ ಭತ್ತದ ಗದ್ದೆಯನ್ನು ಯಾರೂ ಪಾಳು ಬಿಡಬೇಡಿ. ಯುವಕರು ಕೃಷಿಯಲ್ಲಿಯೂ ಸಾಧನೆ ಮಾಡಲು ವಿಪುಲ ಅವಕಾಶವಿದ್ದು ಇಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಬಾಳೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಸಮಾಜ ಸೇವಕ ಆದೇಂಗಡ ವಿನುಉತ್ತಪ್ಪ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ಕಳಕಳಿ ಅಗತ್ಯ. ನಿರ್ಗತಿಕರಿಗೆ ಸಹಾಯ ಹಸ್ತ ನೀಡುವ ಮನೋಭಾವ ಬೆಳಸಿಕೊಳ್ಳಬೇಕು. ಹಿರಿಯರಿಗೆ ಗೌರವ ನೀಡುವ ಮೂಲಕ ಶಿಬಿರದ ಸಮಾಜ ಸೇವಾ ಲಾಭವನ್ನು ಹೊಂದಿಕೊಳ್ಳಲು ಕರೆ ನೀಡಿದರು.

ಶ್ರದ್ಧಾಂಜಲಿ

ಯುವಜನತೆಯ ಮೇಲೆ ಪತ್ರಿಕೋದ್ಯಮದ ಪ್ರಭಾವ ಎಂಬ ವಿಷಯವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಗೋಣಿಕೊಪ್ಪಲಿನ ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಅವರು, ಮೊದಲಿಗೆ ಇತ್ತೀಚೆಗೆ ಅಗಲಿದ ಗೌರಿ ಲಂಕೇಶ್, ಆಂದೋಲನಾ ದಿನ ಪತ್ರಿಕೆಯ ಸಂಪಾದಕ ರಾಜಶೇಖರ್ ಕೋಟಿ ಹಾಗೂ ಮೈಸೂರು ಮಿತ್ರ ಜಿಲ್ಲಾ ವರದಿಗಾರ ಕೆ.ಬಿ. ಮಹಂತೇಶ್ ಅವರ ಕಿರುಪರಿಚಯ ಮಾಡಿದರು ಹಾಗೂ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜು ದಿನಗಳಲ್ಲಿಯೇ ಉತ್ತಮ ಬರವಣಿಗೆಯತ್ತ ಒಲವು ತೋರಬೇಕು. ವೃತ್ತ ಪತ್ರಿಕೆಯನ್ನು ನಿತ್ಯವೂ ಓದುವ ಮೂಲಕ ಲೋಕ ಜ್ಞಾನದ ಅರಿವು ಹೊಂದಬೇಕು. ಪತ್ರಿಕೋದ್ಯಮ ಸವಾಲಿನ ಕ್ಷೇತ್ರವಾಗಿದ್ದು, ಯುವಜನತೆಗೆ ಇದೀಗ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಲು ವಿಫುಲ ಅವಕಾಶವಿದೆ. ಲಾಭದ ಉದ್ಧೇಶ ಹೊಂದದೆ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಪತ್ರಕರ್ತರಾಗಿ ಕಾರ್ಯನಿರ್ವಹಿಸುವದು ಕ್ಷೇಮಕರ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜಸೇವಕ, ಕೃಷಿಕ ಪಾರುವಂಗಡ ಸಿ.ಮೊಣ್ಣಪ್ಪ ಅವರು, ವಿದ್ಯಾರ್ಥಿಗಳು ಸೇವಾ ಮನೋಭಾವನೆಯೊಂದಿಗೆ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮುದಾಯದ ಸಮಸ್ಯೆಗೆ ಸ್ಪಂದಿಸಬೇಕು ಎಂದು ನುಡಿದರು.

ಶೈಕ್ಷಣಿಕ ಕಾರ್ಯಕ್ರಮದ ನಂತರ ವೀರಾಜಪೇಟೆಯ ಅಜಯ್ ನಾರಾಯಣ್ ರಾವ್ ದೇಶ-ವಿದೇಶಗಳ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಏರ್ಪಡಿಸುವ ಮೂಲಕ ಶಿಬಿರಾರ್ಥಿಗಳಿಗೆ ಅಪೂರ್ವ ನೋಟು-ನಾಣ್ಯ ಪರಿಚಯ ಮಾಡಿಕೊಟ್ಟರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಎಸ್.ಆರ್. ತಿರುಮಲಯ್ಯ, ಚೆನ್ನನಾಯಕ, ಉಪನ್ಯಾಸಕರಾದ ಕೆ.ಎಂ. ಕುಸುಮ್, ಪೂವಮ್ಮ ಮುಂತಾದವರು ಉಪಸ್ಥಿತರಿದ್ದರು.