ಸೋಮವಾರಪೇಟೆ, ನ.29: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸರ್ವ ಸದಸ್ಯರ ಸಭೆ ಸ್ಥಳೀಯ ಪತ್ರಿಕಾ ಭವನ ಸಭಾಂಗಣದಲ್ಲಿ ಅಧ್ಯಕ್ಷ ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘಕ್ಕೆ ಸದಸ್ಯರು ಹಾಗೂ ದಾನಿಗಳು ಸಹಕಾರ ನೀಡಿದ ಪರಿಣಾಮವಾಗಿ ಸದಸ್ಯರ ಶ್ರೇಯೋಭಿವೃದ್ಧಿಯೊಂದಿಗೆ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದು ಅಧ್ಯಕ್ಷ ಆರ್. ಮೋಹನ್ ಹೇಳಿದರು.ಸರ್ವ ಸದಸ್ಯರು ಸಹಕಾರ ನೀಡಿದ್ದೇ ಆದಲ್ಲಿ ಸದಸ್ಯರುಗಳ ಬೇಕು-ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಬ್ಬಗಳನ್ನು ಯಶಸ್ವಿಯಾಗಿ ಆಚರಿಸಲಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಗಂಗಾಧರ್ ಮಾತನಾಡಿ, ಸಂಘದ ಸದಸ್ಯರುಗಳು ತಮ್ಮ ಸದಸ್ಯತ್ವವನ್ನು ಪ್ರತಿವರ್ಷ ಸಕಾಲದಲ್ಲಿ ನವೀಕರಿಸಿಕೊಳ್ಳುವ ಮೂಲಕ ಸಂಘ ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಂಘದ ಸದಸ್ಯತ್ವ ನವೀಕರಣವಾಗದ ಹಿನ್ನೆಲೆಯಲ್ಲಿ ಕೆಲವರಿಗೆ ಸೌಲಭ್ಯಗಳನ್ನು ನೀಡಲು ತೊಡಕುಂಟಾಗಿತ್ತು ಎಂದರು. ಸಂಘದ ವಾರ್ಷಿಕ ಮಹಾಸಭೆಯನ್ನು ಮುಂದಿನ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ನಡೆಸಲಾಗುವದು ಎಂದರು.
ಖಜಾಂಚಿ ಮಹಮ್ಮದ್ ರಫೀಕ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ದಾನಿಗಳಿಂದ ಒಟ್ಟು 9,81,458 ರೂ.ಗಳನ್ನು ಸಂಗ್ರಹಿಸಲಾಗಿತ್ತು, ಅದರಲ್ಲಿ ವಿವಿಧ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ, ಊಟೋಪಚಾರಕ್ಕೆ ಸಂಬಂಧಿಸಿದಂತೆ ಒಟ್ಟು 8,38,709 ರೂ.ಗಳು ಖರ್ಚಾಗಿದ್ದು, 1,42,749 ರೂ.ಗಳನ್ನು ಉಳಿತಾಯ ಮಾಡಿರುವ ಬಗ್ಗೆ ಲೆಕ್ಕಪತ್ರಗಳನ್ನು ಮಂಡಿಸಿದರು. ಸಭೆ ಅನುಮೋದನೆ ನೀಡಿತು.ವೇದಿಕೆಯಲ್ಲಿ ಸಂಘದ ಸಹ ಕಾರ್ಯದರ್ಶಿ ಬಿ.ಜಿ. ರವಿ, ಗೌರವಾಧ್ಯಕ್ಷ ಸಿ.ಡಿ. ನೆಹರು, ಗೌರವ ಸಲಹೆಗಾರ ಬಿ.ಪಿ. ಗಣೇಶ್, ರಾಜ್ಯೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಪಿ.ಜಿ. ಶಶಿಧರ್ ಉಪಸ್ಥಿತರಿದ್ದರು.