ಆಲೂರು ಸಿದ್ದಾಪುರ, ನ. 29: ವ್ಯವಸಾಯ ಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಹಾಗೂ ಸ್ನೇಹಿತ ರಿಂದ ಲಕ್ಷಾಂತರ ರು ಕೈಸಾಲವನ್ನು ಮಾಡಿಕೊಂಡಿದ್ದ ರೈತನೊಬ್ಬ ಸಾಲ ತೀರಿಸಲಾರದೆ ಮನನೊಂದು ಹೊಲದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬುಧವಾರ ಬೆಳಗ್ಗೆ ಆಲೂರುಸಿದ್ದಾಪುರ ಸಮಿಪದ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ದೊಡ್ಡಳ್ಳಿಯ ಡಿ.ಜಿ.ಷಣ್ಮುಖ (45) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ರೈತ ಷಣ್ಮುಖ ಅನೇಕ ವರ್ಷಗಳಿಂದ ತನ್ನ ಹೊಲ ಗದ್ದೆಗಳಲ್ಲಿ ಶುಂಠಿ, ಜೋಳ ಮುಂತಾದ ಕೃಷಿಯನ್ನು ಮಾಡುತ್ತಿದ್ದ, ಈತ ವ್ಯವಸಾಯಕ್ಕಾಗಿ 2002 ರಲ್ಲಿ ಗೋಣಿಮರೂರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನಲ್ಲಿ 5 ಲಕ್ಷ ರೂ ಸಾಲ ಮಾಡಿದ್ದರು. ಈಗ ಬ್ಯಾಂಕಿನಲ್ಲಿ ಅಸಲು ಬಡ್ಡಿ ಸೇರಿ 10 ಲಕ್ಷ ರೂ. ಗಳಷ್ಟು ಬೆಳೆದಿದ್ದು, ಇದರ ಜೊತೆಯಲ್ಲಿ ಮತ್ತೆ ವ್ಯವಸಾಯಕ್ಕಾಗಿ ಸ್ನೇಹಿತರೊಂದಿಗೆ 15 ಲಕ್ಷ ರೂ. ಕ್ಕಿಂತಲೂ ಅಧಿಕ ಕೈಸಾಲವನ್ನು ಮಾಡಿಕೊಂಡಿದ್ದಾರೆನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರೈತ ಷಣ್ಮುಖ ಅವರ ಪತ್ನಿ ಚಂದ್ರಾವತಿ ಶನಿವಾರಸಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಬ್ಯಾಂಕಿನ ಸಾಲ ಹಾಗೂ ಕೈಸಾಲವನ್ನು ತೀರಿಸಲಾರದೆ ಪತಿ ಆತ್ಮಹ್ಯತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಭೇಟಿ ನೀಡಿದ್ದಾರೆ. ಮೃತ ಷಣ್ಮುಖ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.