ಮಡಿಕೇರಿ, ನ.28 : ಗುತ್ತಿಗೆದಾರರಾಗಿರುವ ಕೊಳಗದಾಳು ಗ್ರಾಮದ ನಿವಾಸಿ ಬೊಪ್ಪಡತಂಡ ಡಾಲಿ ಎಂಬವರು ಬ್ಯಾಂಕ್‍ವೊಂದರಲ್ಲಿ ಹೊಂದಿದ್ದ ಖಾತೆಯಲ್ಲಿದ್ದ ಹಣದಲ್ಲಿ ಸುಮಾರು 74,596 ರೂ.ಗಳು ಖಾತೆದಾರರ ಅವಗಾಹನೆಗೆ ಬಾರದೆ ನಗದೀಕರಣ ಆಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಮುಂದಿನ ಒಂದು ವಾರದ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುವದಾಗಿ ಕಾವೇರಿ ಸೇನೆ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದೆ.
ಗುತ್ತಿಗೆದಾರರಾಗಿರುವ ಡಾಲಿ ಅವರಿಗೆ ಜಿಲ್ಲಾ ಪಂಚಾಯಿತಿಯಿಂದ ರೂ. 75 ಸಾವಿರ ಜಮಾ ಆಗಬೇಕಾಗಿತ್ತು. ಇದೇ ಸಂದರ್ಭ ತಾ. 4 ರಂದು 9572277436 ಸಂಖ್ಯೆಯಿಂದ ಮೊಬೈಲ್‍ಗೆ ಕರೆ ಬಂದಿದ್ದು, ಹಣ ಜಮೆ ಮಾಡುವದಕ್ಕಾಗಿ ಐಎಫ್‍ಎಸ್‍ಸಿ ಕೋಡ್‍ನ್ನು ಕೇಳಿದ್ದಾರೆ. ಈ ಕರೆ ನೀರು ಸರಬರಾಜು ಇಲಾಖೆಯಿಂದ ಬಂದಿರಬಹುದೆಂದು ಭಾವಿಸಿದ ಡಾಲಿ ಕೋಡ್‍ನ್ನು ನೀಡಿದ್ದಾರೆ. ನಂತರ ಅದೇ ದಿನ ಬ್ಯಾಂಕಿಗೆ ತೆರಳಿ ಪಾಸ್ ಪುಸ್ತಕದಲ್ಲಿ ಮಾಹಿತಿಯನ್ನು ಪಡೆದಾಗ 74,596 ರೂ.ಗಳನ್ನು ಯಾರೋ ಡ್ರಾ ಮಾಡಿರುವದು ಬೆಳಕಿಗೆ ಬಂದಿದೆ. ತಮ್ಮ ಗಮನಕ್ಕೆ ಬಾರದೆ, ಹಣ ಡ್ರಾ ಆಗಿರುವ ಬಗ್ಗೆ ತಾ. 15 ರಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಹಾಗೂ ನವೆಂಬರ್ 16 ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರನ್ನು ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ ರವಿ ಚಂಗಪ್ಪ, ಮುಂದಿನ ಒಂದು ವಾರದೊಳಗೆ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕಾವೇರಿ ಸೇನೆಯಿಂದ ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಕೆ ನೀಡಿದರು.
ಹಣ ಡ್ರಾ ಆದ ಬಗ್ಗೆ ಖಾತೆದಾರರಾದ ಡಾಲಿ ಅವರ ಮೊಬೈಲ್‍ಗೆ ಸಂದೇಶ ಬಾರದೆ ಇರುವ ಕುರಿತು ರವಿ ಚಂಗಪ್ಪ ಸಂಶಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದೂರುದಾರ ಬೊಪ್ಪಡತಂಡ ಡಾಲಿ ಉಪಸ್ಥಿತರಿದ್ದರು.