ಮಡಿಕೇರಿ, ನ. 28: ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಧಾರ್ಮಿಕ ತಳಹದಿಯಲ್ಲಿ ಅಭಿವೃದ್ಧಿಪಡಿಸಲು 20 ಕೋಟಿ ರೂಪಾಯಿನ್ನು ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಬೋಪಣ್ಣ ತಿಳಿಸಿದ್ದಾರೆ.
ಕಳೆದ ಬಟೆಟ್‍ನಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳೂ ಸೇರಿದಂತೆ ಐತಿಹಾಸಿಕ ಜಾಗಗಳನ್ನು ವಿಶ್ವದರ್ಜೆಯಲ್ಲಿ ಅಭಿವೃದ್ಧಿಪಡಿಸಲಾಗುವದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದರಲ್ಲಿ ತಲಕಾವೇರಿಯನ್ನು ಸೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ಹೇರಿದ್ದರು.
ಇದೀಗ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ ದೊರೆತಿದೆ. ಒಟ್ಟು 16 ಪ್ರದೇಶಗಳನ್ನು ಅಭಿವೃದ್ಧಿಪಡಿಸಲು 283.47 ಕೋಟಿ ಮೀಸಲಿರಿಸಲಾಗಿದ್ದು, ಅದರಲ್ಲಿ ತಲಕಾವೇರಿಯನ್ನು ಧಾರ್ಮಿಕ ಕ್ಷೇತ್ರವಾಗಿ ವಿಶ್ವದರ್ಜೆಗೆ ಏರಿಸಲು 20 ರಿಂದ 25 ಕೋಟಿ ಮಂಜೂರು ಮಾಡಿಸಲು ಯತ್ನಿಸುವದಾಗಿ ಬೋಪಣ್ಣ ತಿಳಿಸಿದ್ದಾರೆ. ತಲಕಾವೇರಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು, ಮೂಲಭೂತ ಸೌಕರ್ಯಗಳ ಅಗತ್ಯತೆ ಏನು ಹಾಗೂ ಕೊಡಗು ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉಸ್ತುವಾರಿ ಸಚಿವರು ಕ್ರಮಕೈಗೊಳ್ಳಲು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.