ಸೋಮವಾರಪೇಟೆ,ನ.28: ಅಕ್ರಮ ಸಕ್ರಮ ಯೋಜನೆಯಡಿ ಫಾರಂ ನಂ. 50 ಮತ್ತು 53 ರಡಿ ಅರ್ಜಿ ಸಲ್ಲಿಸಿರುವ ರೈತರಿಗೆ ದಾಖಲೆ ಗಳನ್ನು ನೀಡಲು ಅಧಿಕಾರಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಕೇಳಿ ಬರುತ್ತಿರುವ ವ್ಯಾಪಕ ಆರೋಪದ ಹಿನ್ನೆಲೆ ಇಂದು ಸಂಜೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶಾಂತಳ್ಳಿ ನಾq Àಕಚೇರಿಗೆ ದಿಢೀರ್ ಭೇಟಿ ನೀಡಿದರು.
ಶಾಂತಳ್ಳಿಗೆ ತೆರಳಿದ್ದ ಶಾಸಕರನ್ನು ಸುತ್ತುವರಿದ ಸಾರ್ವಜನಿಕರು, ಇಲ್ಲಿನ ನಾಡಕಚೇರಿಯಲ್ಲಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರಿಂದ ತಲಾ 4 ರಿಂದ 5 ಸಾವಿರ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಡಕಚೇರಿಗೆ ತೆರಳಿದ ಶಾಸಕರು, ಗ್ರಾಮ ಲೆಕ್ಕಿಗ ನಾಗೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಲಂಚದ ಬೇಡಿಕೆ ಇಡುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿವೆ. ಇದು ಮುಂದುವರೆದರೆ ತಕ್ಕ ಕ್ರಮ ಕೈಗೊಳ್ಳಲಾಗುವದು ಎಂದರು.
ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಸಂಬಂಧಿಸಿದಂತೆ ಅಕ್ರಮ ಸಕ್ರಮ ಯೋಜನೆಯಡಿ ಎಷ್ಟು ಮಂದಿ ರೈತರು ಅರ್ಜಿ ಸಲ್ಲಿಸಿದ್ದಾರೆ? ಎಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ? ಎಷ್ಟು ಅರ್ಜಿಗಳು ಕಚೇರಿಯಲ್ಲಿಯೇ ಉಳಿದಿವೆ? 94 ಸಿ. ಅಡಿಯಲ್ಲಿ ಎಷ್ಟು ಫಲಾನುಭವಿಗಳಿದ್ದಾರೆ? ಎಂಬ ಬಗ್ಗೆ ಮಾಹಿತಿ ನೀಡಿ. ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಿ. ರೈತರಿಂದ ಹಣದ ಬೇಡಿಕೆ ಇಟ್ಟರೆ ಪರಿಣಾಮ ಸರಿಯಿರುವದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಗ್ರಾಮ ಲೆಕ್ಕಿಗ ನಾಗೇಂದ್ರ ಅವರ ವಿರುದ್ಧ ಆರೋಪಗಳ ಸುರಿಮಳೆಗೈದ ಸಾರ್ವಜನಿಕರು, ರೈತರ ದಾಖಲಾತಿಗಳನ್ನು ಈ ಅಧಿಕಾರಿ ತನಗೆ ಸೇರಿದ ವಾಹನದಲ್ಲಿಯೇ ಇಟ್ಟುಕೊಂಡು ತಿರುಗುತ್ತಿದ್ದಾರೆ. ಕಚೇರಿಯಲ್ಲಿರಬೇಕಾದ ದಾಖಲೆಗಳನ್ನು ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹಿಂದೆ 50 ಮತ್ತು 52ರಡಿ ಸಲ್ಲಿಸಲಾಗಿದ್ದ ಅರ್ಜಿಗಳು ಕಚೇರಿಯಿಂದ ನಾಪತ್ತೆಯಾಗಿದೆ. ಕಚೇರಿಯ ರಿಜಿಸ್ಟರ್‍ನಲ್ಲಿ ರೈತರ ಹೆಸರಿದ್ದು, ದಾಖಲೆಗಳು ಮಾತ್ರ ನಾಪತ್ತೆಯಾಗಿವೆ ಎಂದು ಆರೋಪಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ರಂಜನ್, ಸರ್ಕಾರಿ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದರು. ಗ್ರಾಮಲೆಕ್ಕಿಗರು ತಮ್ಮ ವಾಹನದಲ್ಲಿ ಅರ್ಜಿಗಳನ್ನು ಇಟ್ಟುಕೊಂಡು ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಜನರನ್ನು ಲೂಟಿ ಮಾಡೋದನ್ನು ನಿಲ್ಲಿಸಿ ಸರ್ಕಾರಿ ಸಂಬಳಕ್ಕಾಗಿ ಕೆಲಸ ಮಾಡಿ ಎಂದು ರಂಜನ್ ಅಧಿಕಾರಿಗೆ ಎಚ್ಚರಿಸಿದರು. ಸಿ ಮತ್ತು ಡಿ ಜಾಗ ಸಮಸ್ಯೆ ಬಗೆಹರಿದಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯ ಬೇಕೆಂದೇನೂ ಇಲ್ಲ. ತಕ್ಷಣ ಅರ್ಜಿಗಳನ್ನು ವಿಲೇವಾರಿ ಮಾಡಿ ಪಟ್ಟೆ ನೀಡಲು ಕ್ರಮವಹಿಸಿ ಎಂದು ಕಂದಾಯ ನಿರೀಕ್ಷಕ ಚಂದ್ರನ್ ಅವರಿಗೆ ಸೂಚಿಸಿದರು.
ಶಾಂತಳ್ಳಿ ನಾಡಕಚೇರಿಯಲ್ಲಿ ಲಂಚ ಕೇಳುವ ಸಿಬ್ಬಂದಿಗಳಿಗೆ ಕಡಿವಾಣ ಹಾಕಿ ಎಂದು ಶಾಸಕರು ಕಂದಾಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ತಾ.ಪಂ. ಸದಸ್ಯ ಧರ್ಮಪ್ಪ, ಜಿ.ಪಂ. ಸದಸ್ಯ ದೀಪಕ್, ಸ್ಥಳೀಯರಾದ ಕೃಷ್ಣಪ್ಪ, ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಂದು ಸಭೆ : ಸೋಮವಾರಪೇಟೆ ತಾಲೂಕು ಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಂದ ಲಂಚದ ಬೇಡಿಕೆ ಒಡ್ಡುತ್ತಿರುವ ಹಾಗೂ ತಾಲೂಕು ಕಚೇರಿಯಲ್ಲಿ ಮಿತಿಮೀರಿರುವ ಬ್ರೋಕರ್‍ಗಳ ಹಾವಳಿ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಹಿನ್ನೆಲೆ ತಾಲೂಕು ತಹಶೀಲ್ದಾರ್ ಸೇರಿದಂತೆ ಶಾಸಕರು ಎಚ್ಚೆತ್ತುಕೊಂಡಿದ್ದಾರೆ. ಕಚೇರಿಯ ಆಡಳಿತ ಸುಧಾರಣೆಗೆ ತಹಶೀಲ್ದಾರ್ ಮಹೇಶ್ ಅವರು ಕೆಲ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿರುವ ಮಧ್ಯೆ ತಾ. 29ರಂದು (ಇಂದು) ತಾಲೂಕು ಕಚೇರಿಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ.
ತಾ. 29ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳನ್ನು ಒಳಗೊಂಡಂತೆ ಸಭೆ ನಡೆಸಲು ಶಾಸಕ ರಂಜನ್ ಮುಂದಾಗಿದ್ದಾರೆ. ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಪ್ರಗತಿ ಪರಿಶೀಲನೆ, ಫಾರಂ 50 ಮತ್ತು 53 ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪ್ರಗತಿ, 94 ಸಿ ಮತ್ತು 94 ಸಿ.ಸಿ. ಅರ್ಜಿಗಳ ವಿಲೇವಾರಿ ಸೇರಿದಂತೆ ಮಧ್ಯವರ್ತಿಗಳ ಹಾವಳಿ ಹಾಗೂ ಲಂಚದ ಬೇಡಿಕೆ ವಿಷಯಗಳ ಬಗ್ಗೆ ಗಂಭೀರ ಚರ್ಚೆಯಾಗುವ ಸಾಧ್ಯತೆಯಿದೆ.