ಆಲೂರು-ಸಿದ್ದಾಪುರ, ನ. 28: ಆಲೂರು-ಸಿದ್ದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 2008 ರಲ್ಲಿ ಆಗಿನ ಸರಕಾರ ರೂ. 1 ಕೋಟಿ ವೆಚ್ಚದಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿತು. ಅದರಂತೆ ಬೆಂಗಳೂರಿನ ಗುತ್ತಿಗೆದಾರರೊಬ್ಬರು 2009 ರಲ್ಲಿ ಕಾಮಗಾರಿ ಕಾರ್ಯವನ್ನು ಕೈಗೊಂಡಿದ್ದರು.
ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ಮಿನಿ ಕ್ರೀಡಾಂಗಣದ ಕಾಮಗಾರಿ ಕಾರ್ಯ ಕಳೆದ 6 ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಮಿನಿ ಕ್ರೀಡಾಂಗಣದ ಒಳಾಂಗಣದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ ಇನ್ನು ಹೊರಾಂಗಣದ ಕಾಮಗಾರಿಯೂ ಸಹ ಇನ್ನು ಬಾಕಿ ಇದೆ. ಕ್ರೀಡಾಂಗಣದ ವೀಕ್ಷಕರ ಗ್ಯಾಲರಿಯ ಮೆಟ್ಟಿಲುಗಳ ನಿರ್ಮಾಣದ ಕಾಮಗಾರಿಯನ್ನು ಹೊರತು ಪಡಿಸಿದಂತೆ ಇನ್ನು ಶೇ. 25 ರಷ್ಟು ಕಾಮಗಾರಿ ಕಾರ್ಯ ಆಗಬೇಕಾಗಿದೆ. ಕಳೆದ 6 ವರ್ಷದಿಂದ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಮತ್ತೆ ಪ್ರಾರಂಭಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದರೂ ಸಹ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಮಿನಿ ಕ್ರೀಡಾಂಗಣದ ಗುತ್ತಿಗೆಯನ್ನು ತೆಗೆದುಕೊಂಡಿದ್ದ ಬೆಂಗಳೂರಿನ ಗುತ್ತಿಗೆದಾರ ಮಹಾಶಯ ಅರ್ಧಕ್ಕೆ ಸ್ಥಗಿತಗೊಳಿಸಿದ ಕಾಮಗಾರಿಯ ಕುರಿತು ಸ್ಥಳೀಯರು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಪಟ್ಟರೂ ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಒಟ್ಟಿನಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಮಿನಿ ಕ್ರೀಡಾಂಗಣದ ಕಾಮಗಾರಿ ಕಾರ್ಯ ಕಳೆದ 6 ವರ್ಷಗಳಿಂದ ಸ್ಥಗಿತಗೊಂಡಿರುವದರಿಂದ ಸ್ಥಳೀಯರು, ಸ್ಥಳೀಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಈ ಕುರಿತು ಸರಕಾರ, ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಇಲ್ಲಿಯ ತನಕ ಯಾವದೇ ಮಾಹಿತಿ, ಉತ್ತರವೂ ಸಿಗದೆ ಗೊಂದಲಕ್ಕೀಡಾಗಿದ್ದಾರೆ. ಈಗ ಅರ್ಧಕ್ಕೆ ಸ್ಥಗಿತಗೊಂಡಿರುವ ಕ್ರೀಡಾಂಗಣದ ಒಳಾಂಗಣದ ಕೊಠಡಿಗಳು ರಾತ್ರಿವೇಳೆಯಲ್ಲಿ ಪುಂಡ ಪೋಕರಿಗಳ ತಾಣವಾಗಿದೆ. ಕೊಠಡಿಗಳಲ್ಲಿ ಸಿಗರೇಟ್, ಮದÀ್ಯದ ಬಾಟಲು, ಇಸ್ಪೀಟ್ ಎಲೆಗಳು ಚೆಲ್ಲಾಡುತ್ತಿರುವದನ್ನು ಕಾಣಬಹುದು.
- ದಿನೇಶ್ ಮಾಲಂಬಿ