ಶ್ರೀಮಂಗಲ, ನ. 28: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆ ಮುಂದಿಟ್ಟು ಕಳೆದ 28 ದಿನಗಳಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಿಂದ ರಾಜ್ಯ ಸರ್ಕಾರದ ಗಮನ ಸೆಳೆÉಯಲು ಸಾಧ್ಯವಾಗಿಲ್ಲ. ಆದ್ದರಿಂದ ಕೇವಲ ಸಾಂಕೇತಿಕ ಧರಣಿ ನಡೆಸುವ ಬದಲು ಪ್ರತಿ ದಿನ ವಿಭಿನ್ನವಾದ ಹೋರಾಟ ವನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಸಲಹೆ ನೀಡಿದರು.

ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾಲೂಕು ರಚನೆ ಬಗ್ಗೆ ಸರ್ಕಾರಕ್ಕೆ ಜನರ ಹೋರಾಟ, ಮಾಧ್ಯಮ ಪ್ರಚಾರ ಮತ್ತು ಜನಪ್ರತಿನಿಧಿಗಳಿಂದ ವಿಚಾರ ಪ್ರಸ್ತಾಪ ಯಾವದು ಸಹ ಪರಿಣಾಮಕಾರಿಯಾಗಿ ಸರ್ಕಾರಕ್ಕೆ ಮುಟ್ಟಿಲ್ಲ. ಶಾಸಕ ಕೆ.ಜಿ.ಬೋಪಯ್ಯ ಅವರು ಅದಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ್ದು, ಪ್ರಬಲವಾಗಿ ಹಠತೊಟ್ಟು ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿಲ್ಲ. ಮಾಧ್ಯಮಗಳ ಪ್ರಚಾರ ರಾಜ್ಯಮಟ್ಟಕ್ಕೆ ತಲುಪುತ್ತಿಲ್ಲ. ಜನರ ಹೋರಾಟವು ಕೇವಲ ಸಾಂಕೇತಿಕ ಪ್ರತಿಭಟನೆಗೆ ಸೀಮಿತವಾಗುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಪರಿಣಾಮಕಾರಿಯಗಿ ಹೋರಾಟ ರೂಪಿಸುವ ಅಗತ್ಯತೆ ಇದೆ. ಕೆಲವು ಮಾಧ್ಯಮಗಳು ತಾಲ್ಲೂಕು ಹೋರಾಟದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದು ಇವು ಹಿಂದಿನಿಂದಲೂ ಕೊಡಗು ವಿರೋಧಿ ನಿಲುವನ್ನು ತಾಳಿದೆ ಎಂದು ಟೀಕಿಸಿದರು. ಪೊನ್ನಂಪೇಟೆ ನೂತನ ನ್ಯಾಯಾಲಯ ಉದ್ಘಾಟನೆಯ ಸಂದರ್ಭ ರಾಜ್ಯ ಸರ್ಕಾರದ ಸಚಿವರು, ಉನ್ನತ ಅಧಿಕಾರಿಗಳು ಆಗಮಿಸುವ ನಿರೀಕ್ಷೆ ಇದೆ. ಆ ದಿನ ಸರ್ಕಾರದ ಗಮನ ಸೆಳೆಯಲು ಬಲಿಷ್ಠ ಹೋರಾಟ ರೂಪಿಸಬೇಕಾಗಿದೆ ಎಂದು ಹೇಳಿದರು.

ತಾಲೂಕು ರಚನಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ ಜಿಲ್ಲೆಯ ಕ್ಷೇತ್ರ ಪುನರ್‍ವಿಂಗಡಣೆ ಸಂದರ್ಭ ಮೂರು ವಿಧಾನ ಸಭಾ ಕ್ಷೇತ್ರ ಎರಡಕ್ಕೆ ಇಳಿದಿದೆ. ಜನಸಂಖ್ಯಾ ನಿಯಂತ್ರಣ ನಿಯಮವನ್ನು ಜಿಲ್ಲೆಯ ಜನತೆ ಪಾಲಿಸಿದ್ದೇ ತಪ್ಪಾಗಿದೆ. ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಕುಟ್ಟದಿಂದ ಕರಿಕೆಯವರೆಗೆ ವಿಶಾಲವಾಗಿದ್ದು 160 ಕೀ.ಮಿ ವಿಸ್ತೀರ್ಣವಿದೆ. ಹೀಗಿರುವಾಗ ಆಡಳಿತ ನಡೆಸುವದು ಹೇಗೆ? ಎಂದು ಪ್ರಶ್ನಿಸಿದರು. ಈಗಾಗಲೇ ಜಿಲ್ಲೆಗೆ ಆಗಮಿಸಿದ ಕೆ.ಪಿ.ಸಿ.ಸಿ ಅಧ್ಯಕ್ಷ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಸ್ತುವಾರಿ ಸಚಿವ ಸೀತಾರಾಮ್ ಅವರು ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ಬೇಡಿಕೆಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇವರನ್ನೊಳಗೊಂಡು ಹಾಗೂ ಹೋರಾಟ ಸಮಿತಿಯಿಂದ ಸಿ.ಎಂ ಅವರೊಂದಿಗೆ ತಾಲೂಕು ರಚನೆ ಬಗ್ಗೆ ಮಾತನಾಡಲು ಕ್ರಮ ಕೈಗೊಳ್ಳ ಲಾಗುವದು. ಸಿಎಂ ಜೊತೆ ಇದುವರೆಗೆ ಮಾತುಕತೆ ನಡೆಸಲು ಪ್ರಯತ್ನಿಸದೆ ಇರುವದು ನಿಜ. ಸಿ.ಎಂ.ಜೊತೆ ಮಾತುಕತೆಗೆ ಸಮಯಾವಕಾಶವನ್ನು ಕೇಳಲಾಗಿದೆ. ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ಈ ಸಂದರ್ಭ ಸಕರಾತ್ಮಕವಾಗಿ ಸರ್ಕಾರ ಸ್ಪಂದಿಸದಿದ್ದರೆ ಶಾಂತಿಯುತ ಹೋರಾಟ ವ್ಯತಿರಿಕ್ತ ತಿರುವು ಪಡೆದರೆ ಅದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳೇ ಹೊಣೆ ಎಂದರು.

ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ ರಾಜ್ಯವನ್ನಾಳಿದ ವಿವಿಧ ಸರ್ಕಾರಗಳು ಜಾತಿ ಪ್ರಾಬಲ್ಯಕ್ಕನು ಗುಣವಾಗಿ ವಾಲ್ಮೀಕಿ, ಕನಕ, ಮತ್ತು ಟಿಪ್ಪು ಜಯಂತಿ ಮಾಡಲು ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಆದರೆ, ಅರ್ಹವಾಗಿರುವ ಪೊನ್ನಂಪೇಟೆ ತಾಲೂಕು ರಚನೆಗೆ ಸಂಪನ್ಮೂಲ ಕೊರತೆ ಇದೆ ಎನ್ನುವದು ಸರಿಯಲ್ಲ. ವಿಧಾನ ಸಭೆಯಲ್ಲಿ ತಾಲೂಕು ಬೇಡಿಕೆಯ ಬಗ್ಗೆ ಪ್ರಬಲವಾಗಿ ಬೇಡಿಕೆ ಮಂಡಿಸ ಬೇಕಾಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬಳಸಿಕೊಳ್ಳಬೇಕಾಗಿದೆ. ಎಲ್ಲಾ ರೀತಿಯಲ್ಲೂ ಅರ್ಹವಾಗಿರುವ ತಾಲೂಕು ರಚನೆಗೆ ಪ್ರಾಮುಖ್ಯತೆ ನೀಡಿ ಹೋರಾಟವನ್ನು ಬಲಿಷ್ಠಗೊಳಿಸಲು ಬೆಂಬಲ ನೀಡಬೇಕೆಂದು ಹೇಳಿದರು.

ಸತ್ಯಾಗ್ರಹದಲ್ಲಿ ಅಖಿಲ ಅಮ್ಮಕೊಡವ ಸಮಾಜದ ಮುಖಂq Àರಾದ ಬಾನಂಡ ಪ್ರಥ್ಯು, ಅಮ್ಮತ್ತಿರ ರೇವತಿ ಪರಮೇಶ್ವರ ಕುತ್ತ್‍ನಾಡ್ ಮತ್ತು ಬೇರಳಿನಾಡ್ ಬೆಳೆಗಾರರ ಸಂಘದ ಅಧ್ಯಕ್ಷ ಲಾಲ ಭೀಮಯ್ಯ, ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ, ಕೆ.ಬಾಡಗ-ಕುಟ್ಟ ಕೊಡವ ವೆಲ್‍ಫರ್ ಅಸೋಸಿಯೇಷನ್ ಅಧ್ಯಕ್ಷ ಬೊಳ್ಳೇರ ರಾಜ ಸುಬ್ಬಯ್ಯ, ಹುದಿಕೇರಿ ಮಲೆನಾಡ್ ಅಸೋಸಿಯೇಷನ್ ಅಧ್ಯಕ್ಷ ಮೀದೇರಿರ ನವೀನ್, ಕಾರ್ಯದರ್ಶಿ ಸಿ.ಎಂ. ಸುದಿ, ಕುತ್ತ್‍ನಾಡ್ ಯುವಕ ಸಂಘದ ಅಧ್ಯಕ್ಷ ಸಿ.ಬಿ. ಮೋಟಯ್ಯ, ಚೇಂದಿರ ರಾಯಿ ಪೆಮ್ಮಯ್ಯ, ಪೇರ್ಮಾಡು ಈಶ್ವರ ದೇವಸ್ಥಾನದ ಅಧ್ಯಕ್ಷ ಕಟ್ಟೇರ ಬಿ.ತಮ್ಮಯ್ಯ, ಜಿ.ಪಂ ಮಾಜಿ ಸದಸ್ಯ ಎಂ.ಎಂ.ಕುಶಾಲಪ್ಪ, ಉಮೇಶ್ ಕೇಚಮಯ್ಯ, ಕಾವೇರಿ ಅಮ್ಮಕೊಡವ ಮಹಿಳಾ ಸಂಘ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ, ಕೆ.ಬಾಡಗ ಗ್ರಾಮಸ್ಥರು, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಡಿಸೆಂಬರ್ 2ಕ್ಕೆ ಸಭೆ: 21 ಗ್ರಾ.ಪಂ ಹಾಗೂ 4 ಹೋಬಳಿಗಳನ್ನು ಸೇರಿಸಿ ಈಗಿರುವ ವೀರಾಜಪೇಟೆ ತಾಲೂಕನ್ನು ವಿಂಗಡಿಸಿ ನೂತನ ಪೊನ್ನಂಪೇಟೆ ತಾಲೂಕು ರಚನೆ ಮಾಡುವ ನಿಟ್ಟಿನಲ್ಲಿ ನವೆಂಬರ್ 1 ರಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರÀಹ ನಡೆಯುತ್ತಿದ್ದು, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ ಕಾರ್ಯಯೋಜನೆ ರೂಪಿಸಲು ಡಿಸೆಂಬರ್ 2 ರಂದು ಪೊನ್ನಂಪೇಟೆ ಎಪಿಸಿಎಂಎಸ್ (ಪೆಟ್ರೋಲ್ ಬಂಕ್ ಸಮೀಪ) ಸಭಾಂಗಣದಲ್ಲಿ ತಾಲ್ಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.