ಕುಶಾಲನಗರ, ನ. 28: ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಜಿಲ್ಲೆಯ ಗ್ರಾಮೀಣ ಕ್ರೀಡಾಪಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕುಶಾಲನಗರದ ರಂಜಿತ್ ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಆರೋಪಿಸಿದ್ದಾರೆ.ಕುಶಾಲನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಬಡ್ಡಿ ತಂಡಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಸೋಸಿಯೇಶನ್ ಕಾರ್ಯನಿರ್ವಹಿಸುತ್ತಿದೆ. ಅಸೋಸಿ ಯೇಶನ್‍ನಲ್ಲಿ ಜಿಲ್ಲೆಯ 12 ತಂಡಗಳು ಅಧಿಕೃತವಾಗಿ ನೊಂದಾಯಿಸಿ ಕೊಂಡಿದ್ದರೂ ಕೂಡ ಯಾವದೇ ಸಭೆಗಳನ್ನು ನಡೆಸದೆ, ಕ್ರೀಡಾಕೂಟಗಳ ಮಾಹಿತಿಗಳನ್ನು ಸಕಾಲದಲ್ಲಿ ಒದಗಿಸದೆ ತಮಗಿಷ್ಟ ಬಂದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆದಂ ಆರೋಪಿಸಿದರು.

ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಳಿಸಿರುವ ತಂಡದಲ್ಲಿಯೂ ಕೂಡ ತಾರತಮ್ಯ ಎಸಗಲಾಗುತ್ತಿದೆ. ಕೂಡಲೇ ಈಗಾಗಲೆ ರಚಿಸಿರುವ ತಂಡವನ್ನು ರದ್ದುಗೊಳಿಸಿ ಎಲ್ಲಾ ತಂಡಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರ್ಹ ಆಟಗಾರರನ್ನು ಆಯ್ಕೆಗೊಳಿಸಬೇಕಿದೆ ಎಂದು ಆಗ್ರಹಿಸಿದರು.

ಜಿಲ್ಲಾಮಟ್ಟದ ಅಸೋಸಿಯೇಶನ್ ನೊಂದಾವಣೆಗೊಂಡು 4 ವರ್ಷಗಳೇ ಕಳೆದರೂ ಕೂಡ ಕಚೇರಿಯನ್ನು ತೆರೆಯದೆ ಶಾಲೆಯೊಂದರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಆದಂ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಪ್ರತಿಭೆಯನ್ನು ಪ್ರೋತ್ಸಾಹಿಸುವದರೊಂದಿಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ರಂಜಿತ್ ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬ್ ಸದಸ್ಯ ಕೈಸರ್ ಇದ್ದರು.