ವೀರಾಜಪೇಟೆ, ನ. 28: ಕಾಕೋಟುಪರಂಬು ಬಳಿಯ ನಾಲ್ಕೇರಿ ಗ್ರಾಮದ ನಿವಾಸಿ ಕೋಟೇರ ಟಿ.ಉತ್ತಯ್ಯ ಹಾಗೂ ಪತ್ನಿ ರಾಣಿ ದಂಪತಿಯನ್ನು ಬೆದರಿಸಿ, ಬಲಾತ್ಕಾರವಾಗಿ ರೂ. 54000 ಹಣವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರು ಎಂ. ದರ್ಶನ್ ಅಲಿಯಾಸ್ ಪೊನ್ನಪ್ಪ ಹಾಗೂ ಎ. ಮಂದಣ್ಣ ಎಂಬಿಬ್ಬರನ್ನು ಬಂಧಿಸಿರುವದಾಗಿ ವೃತ್ತ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ತಿಳಿಸಿದ್ದಾರೆ.

ಆರೋಪಿ ಹಾಗೂ ಪುಕಾರುದಾರರು ಒಂದೇ ಗ್ರಾಮದವರಾಗಿದ್ದು, ಆಸುಪಾಸಿನ ನಿವಾಸಿಗಳು. ಈ ಇಬ್ಬರು ಇಂದು ಉತ್ತಯ್ಯ ಅವರ ಮನೆಗೆ ತೆರಳಿ ಅವರನ್ನು ನಿಂದಿಸಿ ಹಣ ಸುಲಿಗೆಗೆ ಬೆದರಿಕೆ ಹಾಕಿದಾಗ ಮನೆಯಲ್ಲಿದ್ದ ನಗದು ಹಣ ರೂ. 30,000ವನ್ನು ನೀಡಿದ್ದಾರೆ.

ದಂಪತಿಯಿಂದ ರೂ. ಒಂದು ಲಕ್ಷ ಬೇಡಿಕೆ ಇಟ್ಟಿದ್ದ ಇಬ್ಬರು ನಂತರ ಟೌನ್ ಬ್ಯಾಂಕ್‍ನ ಚೆಕ್ ಪಡೆದು ಅಲ್ಲಿಯೂ ರೂ. 20,000ವನ್ನು ಪಡೆದುದಲ್ಲದೆ ಇನ್ನು ರೂ. 13000 ನಗದುಪಡಿಸಲು ಚೆಕ್‍ನ್ನು ಪಡೆದಿದ್ದಾರೆ.

ಪೊಲೀಸರು ಇಬ್ಬರನ್ನು ತಪಾಸಣೆಗೊಳಪಡಿಸಿದಾಗ ದರ್ಶನ್ ಪೊಲೀಸರ ರೌಡಿ ಶೀಟರ್ ಪಟ್ಟಿಯಲ್ಲಿದ್ದಾನೆ. ಈ ಇಬ್ಬರು ಹಣ ವಸೂಲಿ ದಂಧೆಯಲ್ಲಿರುವದು ಗೊತ್ತಾಗಿದೆ. ಉತ್ತಯ್ಯ ದಂಪತಿ ಹಾಗೂ ದರ್ಶನ್, ಮಂದಣ್ಣ ಇಬ್ಬರಿಗೂ ಯಾವದೇ ವ್ಯವಹಾರ, ಲೇವಾದೇವಿಯೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದರ್ಶನ್‍ನನ್ನು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ವೀರಾಜಪೇಟೆ ಟೌನ್ ಬ್ಯಾಂಕ್‍ನ ರೂ. 13000ದ ಚೆಕ್ ದೊರೆತಿದೆ.

ಪೊಲೀಸರ ತನಿಖೆ ಪ್ರಕಾರ ದರ್ಶನ್ ಹಾಗೂ ಉತ್ತಪ್ಪ ಈ ಹಿಂದೆ ಸ್ನೇಹಿತರಾಗಿದ್ದರು. ಉತ್ತಪ್ಪನ ಆಸ್ತಿ, ನಗದು ವ್ಯವಹಾರ ದರ್ಶನ್ ತಿಳಿದುಕೊಂಡು ಉತ್ತಪ್ಪನ ಮಿತೃತ್ವವನ್ನು ದುರುಪಯೋಗ ಪಡಿಸಿಕೊಂಡು ಈ ಅಕ್ರಮ ದಂಧೆಯಲ್ಲಿ ತೊಡಗಿಕೊಂಡು ಮೊದಲಿನಿಂದಲೇ ಉತ್ತಪ್ಪನನ್ನು ಹಣಕ್ಕಾಗಿ ಕಾಡಿಸುತ್ತಿದ್ದನೆಂದು ತಿಳಿದು ಬಂದಿದ್ದು, ದರ್ಶನ್ ಕಾಟ ತಾಳಲಾರದೆ ಇಂದು ನಡೆದ ಘಟನೆಯ ಕುರಿತು ಉತ್ತಪ್ಪ ದಂಪತಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡುವ ಮೂಲಕ ಬೆದರಿಕೆ ಸುಲಿಗೆಗೆ ವಿದಾಯ ಹೇಳಿದ್ದಾರೆ.

ಪೊಲೀಸರು ಇಬ್ಬರ ವಿರುದ್ಧ ವಂಚನೆ, ಬಲಾತ್ಕಾರವಾಗಿ ಹಣ ಸುಲಿಗೆ, ಜೀವ ಭಯದ ಬೆದರಿಕೆಯ ಪ್ರಕರಣ ದಾಖಲಿಸಿದ್ದಾರೆ.