ರೈತ ದೇಶದ ಬೆನ್ನೆಲುಬು ಎನ್ನುವ ಘೋಷಣೆಯಡಿ ಸರಕಾರಗಳು ನೂರಾರು ಯೋಜನೆಗಳನ್ನು ರೂಪಿಸುತ್ತವೆ. ರೈತನಿಲ್ಲದಿದ್ದರೆ ತಿನ್ನಲು ಏನೂ ಇಲ್ಲ ಎನ್ನುವ ಸತ್ಯ ಗೊತ್ತಿದ್ದರೂ, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಇಲಾಖೆಗಳು ನಿಲಕ್ಷ್ಯ ವಹಿಸುತ್ತವೆ. ಹಾಗಾಗಿ ತನಗೆ ಸರಕಾರದಿಂದ ಇರುವ ಸವಲತ್ತುಗಳನ್ನು ಅರಿಯಲಾರದ ಬಡ ರೈತ ಆತ್ಮಹತ್ಯೆಗೆ ಶರಣಾಗುತ್ತಾನೆ. ಅವನ ಜೀವನವನ್ನು ಬೆಳಗಬೇಕಿದ್ದವರು ತಮ್ಮ ಕುಟುಂಬಗಳನ್ನು ಗಟ್ಟಿ ಮಾಡಿಕೊಂಡು ಬಡಪಾಯಿಯ ಬದುಕಿಗೇ ಮುಳ್ಳಾಗುತ್ತಾರೆ.

ವಾರ್ಷಿಕ ಲೆಕ್ಕಾಚಾರದಲ್ಲಿ ಮಾತ್ರ ಯೋಜನೆಗಳಲ್ಲಿ ಶೇ. 100 ರಷ್ಟು ಪ್ರಗತಿ ಎಂದು ತೋರಿಸಿ ಇಲಾಖೆಗಳು, ಅಧಿಕಾರಿಗಳು ಸರಕಾರಗಳು ಭೇಷ್ ಎನ್ನಿಸಿಕೊಳ್ಳುತ್ತವೆ.

ರೈತರನ್ನು ತಲುಪಬೇಕಾದ ಯೋಜನೆಗಳು ಕಾಟಾಚಾರಕ್ಕೆ ನಡೆದ ಬಗ್ಗೆ ‘ಶಕ್ತಿ’ ಬಳಗದ ಇಬ್ಬರು ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಈ ಕೆಳಗಿನಂತಿದೆ.

-ಸಂಪಾದಕ

ಜನಪ್ರತಿನಿಧಿಗಳ ಅರಿವಿಗೂ ಬಾರದ ಯೋಜನೆ

ಮಡಿಕೇರಿ, ನ. 28: ಕೇಂದ್ರ ಸರಕಾರ ರೈತರಿಗೆ ಉತ್ತೇಜನ ನೀಡಲು ಹಲವಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಇಂತಹ ಯೋಜನೆಗಳನ್ನು ರೈತರಿಗೆ ಸಮಗ್ರ ಮಾಹಿತಿ ಹಾಗೂ ಪ್ರಚಾರ ನೀಡಿ ಅನುಷ್ಠಾನಗೊಳಿಸಬೇಕಾದ ಆಯ ಇಲಾಖೆ ಅಧಿಕಾರಿಗಳು ಗುಟ್ಟು ಗುಟ್ಟಾಗಿ ತೆರೆಮರೆಯಲ್ಲಿ ಮಧ್ಯವರ್ತಿಗಳೊಂದಿಗೆ ಕೇವಲ ದಾಖಲೆಗಳಲ್ಲಿ ಕಾರ್ಯಗತಗೊಳಿಸುತ್ತಿರುವದು ವಿಪರ್ಯಾಸ.

ತೋಟಗಾರಿಕಾ ಇಲಾಖೆಯಿಂದ ತಾ. 20 ರಂದು ಕಕ್ಕಬೆ ಬಳಿ ತರಕಾರಿ ಗಿಡ ನೆಡುವ ಮುಖಾಂತರ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದ ಕಾರ್ಯಕ್ರಮವು, ಕರ್ನಾಟಕ ಸರಕಾರ, ಜಿ.ಪಂ. ತೋಟಗಾರಿಕಾ ಇಲಾಖೆ ಹಾಗೂ ಸಹಕಾರಿ ಕೃಷಿಕರ ಸಹಯೋಗದಲ್ಲಿ ಆಯೋಜನೆಗೊಂಡಿದ್ದಾಗಿ ಬ್ಯಾನರ್‍ವೊಂದು ರಾರಾಜಿಸುತ್ತಿತ್ತು.

ಈ ಬಗ್ಗೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ‘ಶಕ್ತಿ’ಗೆ ಮಾಹಿತಿ ನೀಡುತ್ತಾ, ಕರ್ನಾಟಕ ಸರಕಾರದ ಸಹಾಯಧನದೊಂದಿಗೆ ಯೋಜನೆಗೆ ಮುಂದಾಗಿರುವದಾಗಿ ಹೇಳಿಕೆಯಿತ್ತಿದ್ದರು. ಆದರೆ ಈ ಬಗ್ಗೆ ಮಧ್ಯವರ್ತಿ ಏಜೆನ್ಸಿ ಅಗ್‍ರಿಚ್ ಗ್ಲೋಬಲ್ ಎಲ್.ಎಲ್.ಪಿ. ಕಂಪೆನಿ, ಬೆಂಗಳೂರಿನ ಕಾಳಿದಾಸ್ ರಾಜ್ ಪ್ರಕಾರ ಇದೊಂದು ಮಹತ್ವಪೂರ್ಣ ಕೇಂದ್ರ ಸರಕಾರದ ಯೋಜನೆ. ನೇರವಾಗಿ ರೈತರ ಪಾಲ್ಗೊಳ್ಳುವಿಕೆಯೊಂದಿಗೆ ಬೆಂಗಳೂರು ಉದ್ದಿಮೆ ಕೇಂದ್ರದ ಸಹಾಯಧನಕ್ಕೆ ಶೇ. ಸುಮಾರು 35 ರಷ್ಟು ಪಾಲು ಹಣ ನೀಡಿದರೆ ಶೇ. 15 ರಷ್ಟು ರೈತರು ನೆರವು ನೀಡುವ ಮುಖಾಂತರ ಮುಂದಿನ ಎರಡು ವರ್ಷಗಳಲ್ಲಿ ರೂ. 6.08 ಕೋಟಿಯ ಯೋಜನೆ ಕಾರ್ಯಗತಗೊಳ್ಳಲಿದೆ.

ಈ ಯೋಜನೆಯಡಿ ರೈತರು ಸಾವಯವ ಗೊಬ್ಬರದಿಂದ ಉತ್ಕøಷ್ಠ ತರಕಾರಿ, ಹಣ್ಣುಗಳನ್ನು ಬೆಳೆದು ಏಜೆನ್ಸಿಯ ಮೂಲಕ ನೇರವಾಗಿ ಮಾರುಕಟ್ಟೆಗೆ ಒದಗಿಸುವದರೊಂದಿಗೆ ಆರ್ಥಿಕ ಸ್ವಾವಲಂಬಿಗಳಾಗಲು ಉತ್ತೇಜನ ಪಡೆಯಲಿದ್ದಾರೆ ಹಾಗಾಗಿ ಈ ಮಹತ್ವ ಪೂರ್ಣ ಯೋಜನೆಗೆ ‘ಪಬ್ಲಿಕ್ ಪ್ರವೈಟ್ ಪಾರ್ಟಿಸಿಪೇಷನ್ ಇಂಟಿಗ್ರೇಟೆಡ್ ಹಾರ್ಟಿಕಲ್ಚರ್ ಡೆವಲಪ್‍ಮೆಂಟ್’ (ಪಿ.ಪಿ.ಪಿ.-ಐಹೆಚ್.ಡಿ) ಎಂದು ಹೆಸರಿಸಲಾಗಿದೆ.

ಆ ಮೂಲಕ ಯೋಜನೆಯ ಹೆಸರೇ ಹೇಳುವಂತೆ ನೇರವಾಗಿ ಸಾರ್ವಜನಿಕ ಕ್ಷೇತ್ರದಿಂದ ರೈತರು, ಖಾಸಗಿ ರೈತ ಸಂಸ್ಥೆಗಳೊಂದಿಗೆ ಪಾಲ್ಗೊಳ್ಳುವಿಕೆ ಮೂಲಕ ಯೋಜನೆ ಕಾರ್ಯಗತಗೊಳಿಸುವದಾಗಿದೆ. ಇಡೀ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಒಂದು ಘಟಕದಂತೆ ಕೊಡಗಿಗೂ ಅವಕಾಶ ಲಭಿಸಿದೆ.

ಇಂತಹ ಯೋಜನೆಯೊಂದನ್ನು ಜಾರಿಗೊಳಿಸುವ ಸಂದರ್ಭ ಈ ಕೊಡಗಿನಲ್ಲಿ ತೋಟಗಾರಿಕಾ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಿ ಮಾರುಕಟ್ಟೆ ಒದಗಿಸುವ, ಹಾಪ್‍ಕಾಮ್ಸ್‍ನಂತಹ ಸಹಕಾರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಹಿತ ರೈತರಿಗೆ ಅನುಕೂಲ ಕಲ್ಪಿಸಲು ಸಾಧ್ಯವಿದೆ. ಅಲ್ಲಿನ ಪ್ರತಿನಿಧಿಗಳನ್ನು ಸೇರಿಸಿ ಇಲಾಖಾಧಿಕಾರಿಗಳು ಪರಿಣಾಮಕಾರಿ ಯೋಜನೆ ಜಾರಿಗೊಳಿಸಬಹುದಾಗಿದೆ.

ಹೀಗಿರುವಾಗ ಯಾರೊಬ್ಬರೂ ಜನಪ್ರತಿನಿಧಿಗಳನ್ನು ಆಹ್ವಾನಿಸದೆ, ಅಧಿಕಾರಿಗಳು ತಮ್ಮದೇ ಯೋಜನೆ ಎಂಬಂತೆ ಬಿಂಬಿಸಿಕೊಂಡು ಇಂತಹ ಕಾರ್ಯಕ್ರಮ ಜಾರಿಗೆ ಮುಂದಾಗಿರುವದು ಯಾತಕ್ಕಾಗಿ ಎಂಬದು ಪ್ರಶ್ನೆ

ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಇಂದಿಗೂ ಯಾವದೇ ವಾಣಿಜ್ಯ ಬೆಳೆಗಳನ್ನು ಬೆಳೆಯದೆ ಕೇವಲ ಭತ್ತ ಮತ್ತು ತರಕಾರಿ ಬೆಳೆದು ಜೀವನ ನಡೆಸುವ ಸಾವಿರಾರು ಸಣ್ಣ ರೈತ ಕುಟುಂಬಗಳಿವೆ. ಅಂತಹ ಪ್ರಾಮಾಣಿಕ ಬದುಕು ಕಟ್ಟಿಕೊಂಡಿರುವ ರೈತರಿಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಗುಡಿಕೈಗಾರಿಕೆ, ಪ್ರವಾಸೋದ್ಯಮದಂತಹ ಹತ್ತು ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿವೆ.

ಹೀಗಿರುವಾಗ, ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಇಲ್ಲವೇ ಪ್ರಭಾವಿಗಳ ನೆರಳಿನಲ್ಲಿ ಸರಕಾರಿ ಯೋಜನೆಗಳನ್ನು ಕೇವಲ ದಾಖಲೆಗಳಲ್ಲಿ ತೋರಿಸುವ ಪ್ರಯತ್ನವನ್ನು ಪ್ರಶ್ನಿಸಬೇಕಿದೆ.

- ಚಿ.ನಾ. ಸೋಮೆಶ್

ನಾಲ್ಕು ಗೋಡೆಗಳ ಮಧ್ಯೆ ಬೆಳೆ ಸಮೀಕ್ಷೆ...!

ರೈತರಿಗೆ, ಬೆಳೆಗಾರರಿಗೆ, ಕೃಷಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಗಳು ಬಹಳಷ್ಟು ಮಹತ್ವಾಕಾಂಕ್ಷಿ, ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಬಹುತೇಕ ಯೋಜನೆಗಳು ಜಿಲ್ಲಾಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ, ಕಡತಗಳಲ್ಲಿಯೇ ಪ್ರಗತಿ ಸಾಧಿಸುತ್ತಿವೆಯೇ ಹೊರತು ರೈತಾಪಿ ವರ್ಗದ ಮನೆ ಬಾಗಿಲಿಗೆ ತಲಪುತ್ತಿಲ್ಲವೆನ್ನಬಹುದು.

ಇದೀಗ ರೈತರ ಬೆಳೆಗಳ ವಿವರಗಳನ್ನೊಳಗೊಂಡ ತಂತ್ರಜ್ಞಾನ ಆಧಾರಿತ ಕೃಷಿ ಬೆಳೆಗಳ ಸಮೀಕ್ಷೆ ಯೋಜನೆ ಜಾರಿಗೊಂಡಿದೆ. ಮೊಬೈಲ್ ಆ್ಯಪ್ ಮೂಲಕ ರೈತರೇ ತಮ್ಮ ಕೃಷಿ ಬೆಳೆಗಳ ಮಾಹಿತಿಯನ್ನು ಅಪ್‍ಲೋಡ್ ಮಾಡುವಂತಹ ಯೋಜನೆ ಬಹುತೇಕ ಆರ್‍ಟಿಸಿಗಳಲ್ಲಿ ಕೃಷಿ ಬೆಳೆಗಳ ಕುರಿತಾಗಿ ಮಾಹಿತಿ ಅಳವಡಿಕೆಯಾಗದಿರುವದರಿಂದ ಈ ಯೋಜನೆ ಬೆಳೆಗಳ ಕುರಿತು ಮಾಹಿತಿ ಪಡೆಯಲು ಅನುಕೂಲಕರವಾಗಿದೆ. ಆದರೆ ಈ ಬಗ್ಗೆ ರೈತರಲ್ಲಿ ಸಂಪೂರ್ಣ ಮಾಹಿತಿಯ ಕೊರತೆಯಿಲ್ಲದ ಕಾರಣ ಈ ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ತಲಪದಿರುವದು ಜಿಲ್ಲಾ ಕೇಂದ್ರಗಳಲ್ಲಿ ಒಂದಿಷ್ಟು ಅಧಿಕಾರಿಗಳು, ಒಂದಿಬ್ಬರನ್ನು ಕರೆಸಿ ಸಭೆ ನಡೆಸುವದರಿಂದ ಅರ್ಹ ರೈತರಿಗೆ ಮಾಹಿತಿ ಸಿಗುತ್ತಿಲ್ಲವೆನ್ನಬಹುದು.

ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ತಾ. 20 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತ ಮುಖಂಡರೊಂದಿಗೆ ಚರ್ಚೆ ಎಂಬ ಮಾಹಿತಿ ಒಂದು ದಿನದ ಹಿಂದೆ ವಾಟ್ಸ್‍ಅಪ್‍ನಲ್ಲಿ ಬಂದಿದೆ. 10.30ಕ್ಕೆ ಸಭೆ ಎಂದಿದ್ದರೂ, 11.15 ಆದರೂ ಯಾರದೇ ಸುಳಿವಿರಲಿಲ್ಲ. ನಂತರ ತರಾತುರಿಯಲ್ಲಿ ಬಂದ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ ತೆರಳಿದರು. ಅವರ ಪ್ರಕಾರ ಈಗಾಗಲೇ ಶೇ. 52 ರಷ್ಟು ಯೋಜನೆ ಪೂರ್ಣಗೊಂಡಿದೆ. ಶೇ. 100 ಪ್ರಗತಿ ಸಾಧಿಸುವಂತಾಗಬೇಕೆಂದು ಹೇಳಿ ಹೋದರು. ನಂತರ ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಾತ್ಯಕ್ಷಿಕೆ ಮೂಲಕ ಆ್ಯಪ್ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಆದರೆ.., ಆ ಮಾಹಿತಿ ಯಾರಿಗೆ ಎಂಬದೇ ಇಲ್ಲಿ ಪ್ರಶ್ನೆ

ಸಭೆಗೆ ಬಂದವರಲ್ಲಿ ಒಂದಿಷ್ಟು ಮಂದಿ ರೈತರ ಮುಖಂಡರೆಂದು ಕರೆಸಿಕೊಂಡಿದ್ದರು. ಅದು ಬಿಟ್ಟರೆ ಒಂದಿಷ್ಟು ಅಧಿಕಾರಿಗಳು, ಯಾರೋ ವಿದ್ಯಾರ್ಥಿಗಳಿದ್ದರು ಅಷ್ಟೇ... ಇವರುಗಳಿಗೆ ಮಾತ್ರ ಮಾಹಿತಿ ನೀಡಿದರೆ ಸಾಕೆ? ಎಷ್ಟೊಂದು ಮಂದಿ ರೈತರಿದ್ದಾರೆ ಜಿಲ್ಲೆಯಲ್ಲಿ. ಕಾಟಾಚಾರಕ್ಕೆ ಈ ರೀತಿಯಾಗಿ ಸಭೆ ನಡೆಸಿ ಪ್ರಗತಿ ಸಾಧಿಸಲಾಗಿದೆ ಎಂದು ಕಡತಗಳನ್ನು ತಯಾರಿಸುವದಕ್ಕಿಂತ ಆಯಾ ಹೋಬಳಿ ಕೇಂದ್ರಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ, ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಮಾಹಿತಿ ನೀಡಿದರೆ ರೈತರಿಗೂ ಅನುಕೂಲವಾದೀತು. ಸರಕಾರದ ಯೋಜನೆಗಳೂ ಕೂಡ ಫಲಪ್ರದವಾದೀತು...!

- ಕುಡೆಕಲ್ ಸಂತೋಷ್