ಮಡಿಕೇರಿ, ನ. 28: ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ ವಸತಿ ಕೇಂದ್ರದಲ್ಲಿನ ಕುಟುಂಬದವರು ಆಧಾರ್, ಪಡಿತರ, ಚುನಾವಣಾ ಗುರುತಿನ ಚೀಟಿ ಹಾಗೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿಯನ್ನು ಇದುವರೆಗೆ ಪಡೆಯದಿರುವವರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿ ಸೌಲಭ್ಯ ಕಲ್ಪಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿಡಿಒಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ ವಸತಿ ಕೇಂದ್ರದಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಇದುವರೆಗೆ ಕೈಗೊಳ್ಳ ಲಾಗಿರುವ ಕಾರ್ಯಕ್ರಮಗಳ ಪ್ರಗತಿ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ ವಸತಿ ಕೇಂದ್ರದಲ್ಲಿ ಒಟ್ಟು 528 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದ್ದು, ಇವರು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು. ಇಲ್ಲದಿದ್ದಲ್ಲಿ ಹಕ್ಕುಪತ್ರ ವಿತರಿಸಲು ವಿಳಂಬ ವಾಗುತ್ತದೆ. ಆದ್ದರಿಂದ ಇದುವರೆಗೆ ಜಾತಿ ಪ್ರಮಾಣ ಪತ್ರ ಪಡೆಯದ ಕುಟುಂಬ ಗಳು ಜಾತಿ ಪ್ರಮಾಣ ಪತ್ರ ಪಡೆಯಬೇಕು. ಜೊತೆಗೆ ಆಧಾರ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ ಉದ್ಯೋಗ ಚೀಟಿ ಪಡೆಯಲು ಮಾಹಿತಿ ನೀಡುವಂತೆ ಆದಿವಾಸಿ ಮುಖಂಡರಿಗೆ ಸಲಹೆ ಮಾಡಿದರು.

ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ಪ್ರತೀ ವಾರ ಆರೋಗ್ಯ ಶಿಬಿರ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಇದೇ ಸಂದರ್ಭ ತಾಲೂಕು ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು.

ಪ್ರತೀ ಕುಟುಂಬಕ್ಕೆ ಆರೋಗ್ಯ ಕಾರ್ಡ್ ನೀಡಿ ಆರೋಗ್ಯ ತಪಾಸಣೆ ಮಾಡಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವದೇ ದೂರುಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ, ಮೈಸೂರು ಅಥವಾ ಬೆಂಗಳೂರಿಗೆ ಕರೆದುಕೊಂಡು ಹೋಗಲು ಅಗತ್ಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕ ನಿರ್ಮಿಸುವದು. ಸಂಸ್ಕರಣಾ ಘಟಕ ಸ್ಥಾಪಿಸಲು ಹೆಚ್ಚುವರಿ ಭೂಮಿ ಖರೀದಿಸಲು ಕ್ರಮ ಕೈಗೊಳ್ಳುವದು, ಬಸವನಹಳ್ಳಿ ನಿರಾಶ್ರಿತರಿಗೆ ಸ್ಮಶಾನಕ್ಕಾಗಿ ಜಾಗ ಗುರುತಿಸುವದು ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಅಡುಗೆ ಅನಿಲ ವಿತರಣೆ ಮಾಡಬೇಕಿದ್ದು, ಕೆಲವರ ಬಳಿ ಆಧಾರ್, ಬ್ಯಾಂಕ್ ಖಾತೆ ಇರುವದಿಲ್ಲ. ಆದ್ದರಿಂದ ಆಧಾರ್ ಮತ್ತು ಬ್ಯಾಂಕ್ ಖಾತೆ ಮಾಡಿಸಿ ಕೊಳ್ಳುವಂತೆ ಸಲಹೆ ಮಾಡಿದರು.

ಆದಿವಾಸಿ ಮುಖಂಡ ಸ್ವಾಮಿ ವಿವಿಧ ಅಭಿವೃದ್ಧಿ ಬಗ್ಗೆ ಸಲಹೆ ನೀಡಿದರು. ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ ವಸತಿ ಕೇಂದ್ರದಲ್ಲಿ ಒದಗಿಸಲಾಗಿರುವ ಮೂಲ ಸೌಕರ್ಯಗಳು ಹಾಗೂ ಇನ್ನೂ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಪುನರ್ ವಸತಿ ಕೇಂದ್ರದಲ್ಲಿ ಇದುವರೆಗೆ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ತಹಶೀಲ್ದಾರ್ ಮಹೇಶ್, ಜಿ.ಪಂ. ಇಂಜಿನಿಯರ್ ರಾಜ್ ಕುಮಾರ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್, ವೈದ್ಯಾಧಿಕಾರಿ ಚೇತನ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಇತರರು ಇದ್ದರು.