ಸೋಮವಾರಪೇಟೆ, ನ.24: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಯ್ಯಪ್ಪ ಕಾಲೋನಿಯ ಹೆಸರನ್ನು ಅಂಬೇಡ್ಕರ್ ನಗರ ಎಂದು ಮರು ನಾಮಕರಣ ಮಾಡುವ ಪ್ರಯುಕ್ತ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಳವಡಿಸಲಾಗಿದ್ದ ನೂತನ ಫಲಕವನ್ನು ಪಂಚಾಯಿತಿ ಪ್ರಮುಖರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

ಕಳೆದ 40 ವರ್ಷಗಳಿಂದ ಚಾಲ್ತಿಯಲ್ಲಿರುವ ಅಯ್ಯಪ್ಪ ಕಾಲೋನಿಯ ಹೆಸರನ್ನು ಇದೀಗ ಅಂಬೇಡ್ಕರ್ ನಗರ ಎಂದು ಬದಲಾಯಿಸಲು ಗ್ರಾಮದ ಕೆಲವರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದು, ಪಂಚಾಯಿತಿ ಅನುಮತಿ ನೀಡುವ ಮೊದಲೇ ಅಂಬೇಡ್ಕರ್ ನಗರವೆಂದು ನಾಮಕರಣ ಮಾಡಿ ನೂತನ ಬೋರ್ಡ್‍ನ್ನು ನಿನ್ನೆ ಬೆಳಿಗ್ಗೆ ಅಳವಡಿಸಲಾಗಿತ್ತು.

ಅದರ ಉದ್ಘಾಟನೆಯನ್ನು ಪ್ರಜಾ ಪರಿವರ್ತನ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಅವರ ನೇತೃತ್ವದಲ್ಲಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಿಂದ ನೆರವೇರಿಸಲು ನಿನ್ನೆ ಸಂಜೆ 4 ಗಂಟೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಗ್ರಾಮದ 30ಕ್ಕೂ ಅಧಿಕ ಮಂದಿ ತಾಲೂಕು ಕಚೇರಿಗೆ ತೆರಳಿ ಗ್ರಾಮದ ಹೆಸರು ಬದಲಾವಣೆಗೆ ಆಕ್ಷೇಪ ಸಲ್ಲಿಸಿದರು. ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಈ ಹಿನ್ನೆಲೆ ಸಂಜೆ ವೇಳೆಗೆ ಸ್ಥಳಕ್ಕಾಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಜನ, ಅಭಿವೃದ್ಧಿ ಅಧಿಕಾರಿ ಸುಮೇಶ್, ಪಂಚಾಯಿತಿಯಿಂದ ಅನುಮತಿ ಪಡೆಯದೇ ಗ್ರಾಮದ ಮುಖ್ಯರಸ್ತೆಯಲ್ಲಿ ಅಳವಡಿಸಿದ್ದ ನೂತನ ಫಲಕವನ್ನು ತೆರವುಗೊಳಿಸಿ ಪಂಚಾಯಿತಿ ಸುಪರ್ದಿಗೆ ಪಡೆದುಕೊಂಡರು.

ಗ್ರಾಮದ ಹೆಸರು ಬದಲಾವಣೆ ಮಾಡುವ ಬಗ್ಗೆ ಗ್ರಾಮಸ್ಥರಲ್ಲೇ ಪರ ವಿರೋಧ ಅಭಿಪ್ರಾಯಗೊಂಡಿದೆ. ಇದರೊಂದಿಗೆ ನಾಮಫಲಕ ಅಳವಡಿಸಲು ಪಂಚಾಯಿತಿಯಿಂದ ಯಾವದೇ ಅನುಮತಿ ಪಡೆದಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆದೇಶ ಬರುವ ಮೊದಲೇ ಫಲಕ ಅಳವಡಿಸಲಾಗಿದೆ. ಗ್ರಾಮದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಯಾವದೇ ಚರ್ಚೆ ನಡೆಸದೇ ಕೆಲವರು ಫಲಕ ಅಳವಡಿಸಿರುವದು ಸರಿಯಲ್ಲ ಎಂದು ಗ್ರಾಮದ ರಾಜು, ಸುರೇಶ್ ಸೇರಿದಂತೆ ಇತರರು ಅಭಿಪ್ರಾಯಿಸಿದರು.