ಮಡಿಕೇರಿ: ಇಲ್ಲಿನ ಕಸಬ ವೃತ್ತದ ಕಾಲೇಜು ಹಿಂಭಾಗ ಮತ್ತು ಸಂಪಿಗೆ ಕಟ್ಟೆ ಅಂಗನವಾಡಿ ಕೇಂಧ್ರಗಳಲ್ಲಿ ಕಾರ್ಯಕರ್ತೆಯರಾದ ನೀತು, ಯಶೋದ ಹಾಗೂ ಸಹಾಯಕಿಯರಾದ ರಾಧ, ಚಂದ್ರಕಲಾ ಅವರ ಪರಿಶ್ರಮ, ಪೋಷಕರು ಮತ್ತು ಬಾಲ ವಿಕಾಸ ಸಮಿತಿ ಸದಸ್ಯರ ಸಹಕಾರದೊಂದಿಗೆ ಅಂಗನವಾಡಿ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಆಟೋಟ ಸ್ಪರ್ಧೆ, ಗಾಯನ ಮತ್ತು ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೃಷ್ಣ, ರಾಧ, ಕೊರವಂಜಿ, ಜವಹರಲಾಲ್ ನೆಹರು, ಸ್ವಾಮಿ ವಿವೇಕಾನಂದ, ಆನೆ, ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ವೇಷಧಾರಣೆ ಮಾಡಿಕೊಂಡು ತೊದಲು ನುಡಿಗಳಲ್ಲಿ ಹಾಡುಗಳನ್ನು ಹೇಳುತ್ತಾ ನೃತ್ಯ ಮಾಡುತ್ತಾ ಮಕ್ಕಳು ಸಂಭ್ರಮಿಸಿದರು. ಎಲ್ಲಾ ಮಕ್ಕಳಿಗೆ ಸಿಹಿ ಮತ್ತು ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು, ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಮಾತೃಪೂರ್ಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವಲ್ಲಿ ಸಮುದಾಯದ ಪಾತ್ರ ಇದರಿಂದ ಮಕ್ಕಳಿಗೆ ಆಗುವ ಅನುಕೂಲದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗನವಾಡಿ ಕೇಂದ್ರದ ಮಗು ಹರ್ಷಿತ್ ವಹಿಸಿದ್ದರು. ಪ್ರಾರ್ಥನೆ ಮತ್ತು ಉದ್ಘಾಟನೆಯನ್ನು ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಂದ ನೆರವೇರಿಸಿದ್ದು ವಿಶೇಷವಾಗಿತ್ತು.