ಕುಶಾಲನಗರ, ನ. 22: ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗ ಹಾಗೂ ಭಾಗಮಂಡಲ ವನ್ಯಜೀವಿ ವಲಯದ ವತಿಯಿಂದ ಪ್ರೌಢಶಾಲಾ ಮಕ್ಕಳಲ್ಲಿ ಅರಣ್ಯಗಳು, ವನ್ಯಜೀವಿ ಸಂಕುಲಗಳ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9 ನೇ ತರಗತಿ ವಿದ್ಯಾರ್ಥಿ ಗಳಿಗೆ ಚಿಣ್ಣರ ವನದರ್ಶನ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ, ಆನೆಕಾಡು ಅರಣ್ಯ, ಕೆದಕಲ್ ದೇವರಕಾಡು ಹಾಗೂ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದ ಶಾಲಾ ಮಕ್ಕಳಿಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಲಾಯಿತು.

ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪ್ರತಿಜ್ಞಾ ವಿಧಿ ಬೋಧಿಸಿದರು. ಚಿಣ್ಣರ ವನದರ್ಶನದ ಮಹತ್ವ ಕುರಿತು ಭಾಗಮಂಡಲ ಉಪ ವಲಯ ಅರಣ್ಯಾಧಿಕಾರಿ ಅಮೃತೇಶ್ ಮಾತನಾಡಿದರು.

ಶಾಲೆಯ ಶಿಕ್ಷಕ ಎಸ್.ಪಿ. ಪರಮೇಶ್, ವಿದ್ಯಾರ್ಥಿಗಳಿಗೆ ಕಾಡಿನ ಗಿಡ-ಮರಗಳು ಹಾಗೂ ಸಸ್ಯಸಂಕುಲ ಕುರಿತು ಮಾಹಿತಿ ನೀಡಿದರು. ವನಪಾಲಕ ವಾಗೀಶ್, ಶಿಕ್ಷಕರಾದ ಎಂ.ಎ. ಅಯ್ಯಪ್ಪ, ಬಿ.ಡಿ. ಗಣೇಶ್ ಇದ್ದರು.

ವನದರ್ಶನ ಕಾರ್ಯಕ್ರಮದ ನಂತರ ಮಕ್ಕಳಿಗೆ ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.