ವೀರಾಜಪೇಟೆ, ನ. 22: ಬಿಲ್ಲವ ಸಮುದಾಯದ ಜನರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವದರೊಂದಿಗೆ ಸಂಘಟನೆ ಪ್ರಗತಿಯತ್ತ ಸಾಗಲು ಪರಸ್ಪರ ಸಹಕರಿಸಬೇಕು. ಸಮುದಾಯದ ಅಭಿವೃದ್ಧಿಗೆ ಸಂಘ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಲಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಹೇಳಿದರು. ವೀರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಲ್ಲವ ಸೇವಾ ಸಂಘದ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್, ವೀರಾಜಪೇಟೆ ತಾಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಬಿಲ್ಲವ ಜನಾಂಗದವರಿದ್ದು ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು.
ಬಿಟ್ಟಂಗಾಲದ ಬಳಿಯ ಅಂಬಟ್ಟಿ ಗ್ರಾಮದ ಸ್ವಂತ ಕಟ್ಟಡದಲ್ಲಿ ಸಂಘವು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿ ವರ್ಷ ನಾರಾಯಣ ಗುರು ಜಯಂತಿ ಹಾಗೂ ಜನಾಂಗದಲ್ಲಿ ಒಗ್ಗಟ್ಟು ಮೂಡಿಸಲು ಕ್ರೀಡಾಕೂಟ ಗಳನ್ನು ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೂ 5 ಕೋಟಿ ವೆಚ್ಚದಲ್ಲಿ ಎಲ್ಲ ಸೌಲಭ್ಯಗಳಿಂದ ಕೂಡಿದ ಆಧುನಿಕ ಸಮುದಾಯ ಭವನವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಜನಾಂಗ ಬಾಂಧವರ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಿ.ಎಂ. ಗಣೇಶ್, ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಸಹ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಬಿ.ಕೆ. ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ: ಕಳೆದ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರೇಕ್ಷಿತಾ ಬಿ.ಎಸ್., ತೀರ್ಥನಾ ಬಿ.ಹೆಚ್., ಹೃತಿಕಾ ಬಿ,ಇ., ಪ್ರತಿಭಾ ಬಿ.ಡಿ., ಯಶೀತಾ ಬಿ.ಜೆ., ಜನಿತಾ ಬಿ.ಸಿ., ಪ್ರಜ್ವಲ್ ಬಿ.ಆರ್., ಪ್ರಣಾಮ್ ಬಿ.ಆರ್., ಅಕ್ಷಯ್ ಬಿ.ಜಿ., ಡೀನಾ ಬಿ.ಎಂ., ದ್ವಿತೀಯ ಪಿಯುಸಿಯಲ್ಲಿ ಜೋತ್ನಾ ಬಿ.ಎಸ್., ಸಾಹಿತ್ಯ ಎನ್.ಎಂ., ಅವೀಲ್ ಬಿ.ಎಸ್., ಸಂದ್ಯಾ ಬಿ.ಎಂ., ಅನುಷಾ ಬಿ.ಸಿ., ಪುನಿತ್ ಬಿ.ಸಿ., ಭವ್ಯಾ ಬಿ.ಜೆ. ಹದಿನಾಲ್ಕು ವರ್ಷ ವಯೋಮಿತಿಯ ಹಾಕಿ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಪೊನ್ನಂಪೇಟೆಯ ಬಿಪಿನ್ ಬಿ.ಆರ್., ಬೆಂಗಳೂರು ವಿಶ್ವ ವಿದ್ಯಾಲಯದ ಎಂಎಸ್‍ಸಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಪಾಲಂಗಾಲದ ಬಿ.ಕೆ. ಸೌಮ್ಯ ಹಾಗೂ ಸಂಘಕ್ಕೆ ಉದಾರ ದಾನ ನೀಡಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಡಿ. ಮುಕುಂದ, ಗೋಣಿಕೊಪ್ಪದ ಪ್ರಕಾಶ್ ರಾಮಯ್ಯ ಪೂಜಾರಿ, ಹಳ್ಳಿಗಟ್ಟುವಿನ ಬಿ.ಎಸ್. ನಾರಾಯಣ್ ಅವರುಗಳನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಬಿ.ಎಂ. ಗಣೇಶ್ ಸ್ವಾಗತಿಸಿದರೆ, ನಿರ್ದೇಶಕ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ಸುಂದರಿ ವಂದಿಸಿದರು.