ಗೋಣಿಕೊಪ್ಪಲು, ನ. 20 : ಕೊಡಗು ಧ್ವನಿ ವಾರಪತ್ರಿಕೆಯ 9ನೇ ವಾರ್ಷಿಕೋತ್ಸವ ಇಲ್ಲಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕೆಗಳು ಜಾತಿ, ಪಕ್ಷ, ಭಾಷೆಯ ಹಂಗಿಲ್ಲದೆ ನ್ಯಾಯದ ಪರ ಕೆಲಸ ಮಾಡಬೇಕು ಎಂದರು.

ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವ ವಾರಪತ್ರಿಕೆ ಉತ್ತಮ ವರದಿ ಮೂಲಕ ಜನಮನ ಗೆದ್ದಿದೆ ಎಂದರು.

ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ ಜಗದೀಶ್ ಮಾತನಾಡಿ, ಹಲವು ಕಷ್ಟದ ನಡುವೆ ಪತ್ರಿಕೆ ಮುನ್ನಡೆಯುತ್ತಿದ್ದು ಜನರ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸುತ್ತಿದೆ. ದಶಮಾನೋತ್ಸವ ಸಂದರ್ಭ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುವದು ಹಾಗೂ ಲಾಭದ ಒಂದು ಭಾಗವನ್ನು ವರದಿಗಾರರ ತುರ್ತು ನಿಧಿಗೆ ಮೀಸಲಿರಿಸಲಾಗುವದು ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕೆಯ ಉಪಸಂಪಾದಕ ರಾಕೇಶ್ ಕೊಡಗು, ವರದಿಗಾರದ ಪ್ರಭುದೇವ್, ಸತ್ಯಮೂರ್ತಿ, ಮುಸ್ತಾಫ, ದರ್ಶನ್, ಸಲೀಂ, ಐಪುಮಾಡ ರೋನಿ, ಶ್ರೀನಿವಾಸ್, ಛಾಯಗ್ರಾಹಕ ಎಸ್.ಎಲ್ ಶಿವಣ್ಣ ಇದ್ದರು. ಚೆನ್ನನಾಯಕ್ ಸ್ವಾಗತಿಸಿದರು, ಕಂದಾದೇವಯ್ಯ ನಿರೂಪಿಸಿ ವಂದಿಸಿದರು.