ಸೋಮವಾರಪೇಟೆ, ನ. 10: ಸಿಪಿಐ(ಎಂ.ಎಲ್) ರೆಡ್‍ಸ್ಟಾರ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ‘ಅಕ್ಟೋಬರ್ ಕ್ರಾಂತಿಯ 100ನೇ ವರ್ಷಾಚರಣೆ’ ಅಂಗವಾಗಿ ‘ರಷ್ಯಾ ಕ್ರಾಂತಿಯ ಅವಲೋಕನ ಮತ್ತು ಭಾರತದ ಎಡ ಚಳುವಳಿ’ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್. ಪೂಜಾರ, ಶೋಷಣೆ-ದೌರ್ಜನ್ಯದಿಂದ ನೊಂದಿರುವ ದೇಶದ ಶ್ರಮಜೀವಿಗಳು ಕಮ್ಯೂನಿಸ್ಟ್ ಸಿದ್ಧಾಂತದ ಹಿಂದೆ ಹೋಗಬೇಕಾದ ಅನಿವಾರ್ಯ ಒದಗಿದೆ ಎಂದು ಅಭಿಪ್ರಾಯಿಸಿದರು.

ಕ್ರಾಂತಿ ಒಂದು ದಿನದ ಹೋರಾಟವಲ್ಲ. ಸಣ್ಣ ಸಣ್ಣ ಕ್ರಾಂತಿಗಳು ದೊಡ್ಡ ಕ್ರಾಂತಿಗಳಿಗೆ ನಾಂದಿ ಯಾಗುತ್ತವೆ. ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಭೂಮಾಲೀಕರ ಶೋಷಣೆಯಿಂದ ದೌರ್ಜನ್ಯ ಕ್ಕೊಳಗಾದ ಶ್ರಮಜೀವಿಗಳಿಗೆ ಹೋರಾಟದ ಮೂಲಕ ಬದುಕುವ ಹಕ್ಕು ಲಭಿಸಿದೆ. ಇದೂ ಸಹ ಕ್ರಾಂತಿಯೇ ಆಗಿದೆ ಎಂದು ವಿಶ್ಲೇಷಿದರು.

ರಷ್ಯಾದ ಕ್ರಾಂತಿವೀರ ಲೆನಿನ್ ಕಾರ್ಮಿಕರನ್ನು ಸೈನಿಕರ ರೀತಿಯಲ್ಲಿ ಸಂಘಟಿಸಿದ್ದರು. ಭಾರತ ದೇಶದಲ್ಲಿ ಶೇ. 90 ರಷ್ಟಿರುವ ದುಡಿಯುವ ವರ್ಗ ತಮ್ಮ ಹಕ್ಕಿಗಾಗಿ ಕ್ರಾಂತಿ ಮಾಡಬೇಕಾಗಿದೆ ಎಂದು ಹೇಳಿದರು. ಈಗ ಸಾಮ್ರಾಜ್ಯಶಾಹಿಗಳ ಆಡಳಿತವಿದೆ. ಶ್ರಮಜೀವಿಗಳ ಸಮಾಜವಾದದ ಪರ್ಯಾಯ ಶಕ್ತಿ ಬೆಳೆಯಬೇಕು. ದುಡಿಯುವ ವರ್ಗ ರಾಜ್ಯವಾಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್, ಮೈಸೂರು ಜಿಲ್ಲಾ ಅಧ್ಯಕ್ಷ ಕಂದೇಗಾಲ್ ಶ್ರೀನಿವಾಸ್, ಸಿಪಿಐ (ಎಂ.ಎಲ್) ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮತ್ತಿತರರು ಉಪಸ್ಥಿತರಿದ್ದರು.