ಮಡಿಕೇರಿ, ನ. 10: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿಯ ಮೂವರು ಶಾಸಕರೊಂದಿಗೆ ಸಂಘ ಪರಿವಾರದ ಒಟ್ಟು 245 ಮಂದಿಯನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ ಎಂದು ಕೊಡಗಿನ ಬಂದೋಬಸ್ತ್ ಉಸ್ತುವಾರಿ ಹೊಂದಿದ್ದ ಎಡಿಜಿಪಿ ಭಾಸ್ಕರ್‍ರಾವ್ ತಿಳಿಸಿದ್ದಾರೆ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 102 ಮಂದಿ, ವೀರಾಜಪೇಟೆಯಲ್ಲಿ 33 ಹಾಗೂ ಸೋಮವಾರಪೇಟೆಯಲ್ಲಿ 110 ಮಂದಿ ಸಹಿತ ಇನ್ನೂರ ನಲವತ್ತೈದು ಮಂದಿಯನ್ನು ವಶಕ್ಕೆ ಪಡೆಯುವದರೊಂದಿಗೆ ಬಿಡುಗಡೆ ಗೊಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.ಅಲ್ಲದೆ ಶಾಸಕರುಗಳ ಬಂಧನ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ 71ರ ಅನ್ವಯ ವಿಧಾನಸಭೆಯ ಅಧ್ಯಕ್ಷರಿಗೆ

(ಮೊದಲ ಪುಟದಿಂದ) ತುರ್ತು ಸಂದೇಶದೊಂದಿಗೆ ಮಾಹಿತಿ ನೀಡಿರುವದಾಗಿಯೂ ಅವರು ಮಾಧ್ಯಮಗಳಿಗೆ ವಿವರಿಸಿದರು.

ಪರ-ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆ ನಡೆದಿದ್ದು, ಕೊಡಗಿನ ಶಾಂತಿ ಕಾಪಾಡುವಲ್ಲಿ ಸ್ಪಂದಿಸಿದ ಜನತೆಗೆ ಅವರು ಅಭಿನಂದನೆ ಸಲ್ಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಕೂಡ ನಿಗದಿತ ಟಿಪ್ಪು ಜಯಂತಿ ಶಾಂತಿಯುತವಾಗಿ ಆಚರಣೆಗೊಂಡಿದ್ದಾಗಿ ಪ್ರಕಟಿಸಿದರು. ಯಾವದೇ ಅಹಿತಕರ ಘಟನೆ ಸಂಭವಿಸದಂತೆ ಸಣ್ಣಪುಟ್ಟ ಪ್ರಸಂಗ ಹೊರತು ಸಹಕರಿಸಿದ ಎಲ್ಲರಿಗೆ ಅವರುಗಳು ಜಿಲ್ಲಾಡಳಿತದಿಂದ ಕೃತಜ್ಞತೆ ಸಲ್ಲಿಸಿದರು.