ಮಡಿಕೇರಿ, ನ. 10: ಟಿಪ್ಪು ಜಯಂತಿ ಆಚರಣೆಗೆ ಪ್ರತಿರೋಧವೊಡ್ಡಲು ಮುಂದಾದ ಬಿಜೆಪಿ ಹಾಗೂ ಸಂಘ ಪರಿವಾರದ ನೂರಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಿತು.ಟಿಪ್ಪು ಜಯಂತಿಗೆ ಕೊಡಗಿನಲ್ಲಿ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ತುಕಡಿ, ಆರ್‍ಎಎಫ್, ಸಿಆರ್‍ಪಿಎಫ್ ಭದ್ರತಾ ಪಡೆಗಳನ್ನು ಒಳಗೊಂಡು ಮಡಿಕೇರಿ ನಗರ ಖಾಕಿ ಸರ್ಪಗಾವಲಿನಲ್ಲಿತ್ತು. ಟಿಪ್ಪು ವಿರೋಧಿ ಹೋರಾಟ ಸಮಿತಿ ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಜನ ಸಂಚಾರದಲ್ಲಿಯೂ ಕುಸಿತ ಕಂಡುಬಂತು. ಕಾಲೇಜು ರಸ್ತೆ, ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೆಲ ಅಂಗಡಿಗಳು ಮಾತ್ರ ತೆರೆಯಲ್ಪಟ್ಟಿದ್ದವು.ಕೊಡಗು ಜಿಲ್ಲಾಡಳಿತ ನಿಗದಿಪಡಿಸಿದ್ದಂತೆ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆದಿತ್ತು. ಮುಂಜಾನೆ ಯಿಂದಲೇ ರಾಜರ ಕೋಟೆಯ ಸುತ್ತ ಖಾಕಿ ಪಡೆ ಆವರಿಸಿಕೊಂಡಿತ್ತು. ಕೋಟೆ ಒಳಪ್ರವೇಶಿಸಲು ಇರುವ ಎಲ್ಲ ದ್ವಾರಗಳು

(ಮೊದಲ ಪುಟದಿಂದ) ಸೇರಿದಂತೆ ಕೋಟೆ ಆವರಣ ಸಂಪೂರ್ಣ ಭದ್ರತಾ ಸಿಬ್ಬಂದಿಯ ಹಿಡಿತದಲ್ಲಿದ್ದು, ಜಿ.ಟಿ. ವೃತ್ತ, ಐಜಿ ವೃತ್ತ, ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಾರ್ಯಕ್ರಮ ಆರಂಭಗೊಂಡಿತ್ತು. ಇದೇ ವೇಳೆಗೆ ಓಂಕಾರೇಶ್ವರ ದೇವಾಲಯದಲ್ಲಿ ಕುಟ್ಟಪ್ಪ ಸ್ಮರಣಾರ್ಥ ಶಾಂತಿ ಪೂಜೆ ನೆರವೇರಿಸಿ, ಜನತಾ ಬಜಾರ್ ಸಮೀಪ ಜಮಾಯಿಸಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಟಿಪ್ಪು ಜಯಂತಿಗೆ ದಿಕ್ಕಾರ, ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಧಿಕ್ಕಾರ ಕೂಗುತ್ತಾ ‘ಜೈ ಶ್ರೀರಾಮ್’ ಎಂಬ ಘೋಷಣೆಯೊಂದಿಗೆ ಕೋಟೆಯತ್ತ ಮುನ್ನುಗಲು ಮುಂದಾದರು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಪೊಲೀಸರು, ಆರ್‍ಎಎಫ್, ಕೆಎಸ್‍ಆರ್‍ಪಿ ತುಕಡಿಯ ಸಿಬ್ಬಂದಿಗಳು ಕಾರ್ಯಕರ್ತರಿಗೆ ತಡೆಯೊಡ್ಡಿದರು. ಈ ಸಂದರ್ಭ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರುತ್ತಿದೆ ಎನ್ನುವಷ್ಟರಲ್ಲಿ ಡಿವೈಎಸ್ಪಿ ಸುಂದರ್‍ರಾಜ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳೊಂದಿಗೆ ಸೇರಿಕೊಂಡರು. ನೂಕಾಟ ತಳ್ಳಾಟದ ನಡುವೆ ವಾತಾವರಣ ಬಿಸಿಯೇರುತ್ತಿದ್ದಂತೆ ಕಾರ್ಯಕರ್ತರನ್ನು ಬಂಧಿಸ ಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ಜಿ.ಪಂ. ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಭಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಮಾರ್, ಹಿಂದೂ ಜಾಗರಣ ವೇದಿಕೆ ಪ್ರಮುಖ ಅಜಿತ್, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಧನಂಜಯ, ರಾಭಿನ್ ದೇವಯ್ಯ, ಅರುಣ್ ಶೆಟ್ಟಿ, ಪ್ರಸನ್ನ ಭಟ್, ಸಜಿಲ್ ಕೃಷ್ಣನ್, ಸುಕುಮಾರ್, ಕಮಲ್, ಬಿ.ಕೆ. ಅರುಣ್ ಕುಮಾರ್, ಬಿ.ಕೆ. ಜಗದೀಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಬಂಧನಕ್ಕೊಳಗಾದರು. ಬಂಧಿತರನ್ನು ಜಿಲ್ಲಾ ಎಸ್ಪಿ ಕಚೇರಿ ಆವರಣಕ್ಕೆ ಕರೆದೊಯ್ದು ಟಿಪ್ಪು ಜಯಂತಿ ಆಚರಣೆ ಮುಕ್ತಾಯಗೊಂಡ ಬಳಿಕ ಬಿಡುಗಡೆಗೊಳಿಸಲಾಯಿತು.