ಕುಟ್ಟ ರಕ್ಷಣಾ ವೇದಿಕೆ: ಕನ್ನಡದ ಭಾಷೆ, ಸಾಹಿತ್ಯದ ಬೆಳವಣಿಗೆಯಾದರೆ ಗಡಿನಾಡಿನಲ್ಲು ಕನ್ನಡ ನಾಡು ನೆಲ ಜಲ ಉಳಿಯಲು ಸಾಧ್ಯ ಎಂದು ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ಪಟ್ಟರು.

ಕುಟ್ಟ ವಿಭಾಗದ ಕನ್ನಡ ರಕ್ಷಣಾ ವೇದಿಕೆಯಿಂದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎಸ್. ಸುರೇಶ್ ಮಾತನಾಡಿ, ಕೊಡಗು-ಕೇರಳ ಗಡಿಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಗಾಗಿ ಸಂಘಟನೆ ಶ್ರಮಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಫಿ ಬೆಳೆಗಾರ ವಿ.ಟಿ. ಗೋಪಾಲ್ ಮಾತನಾಡಿ, ಭಾಷೆ ಉಳಿಯಲು ಸಂಘಟನೆಗಳ ಶ್ರಮ ಅಗತ್ಯ ಎಂದು ಹೇಳಿದರು. ಸಭೆಯಲ್ಲಿ ಕುಟ್ಟ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೇಖರ್, ಹೆಚ್. ತಿಮ್ಮ, ಜೆ.ಎಂ. ರಾಜಾ, ಪಿ.ವಿ. ರೆನ್ನಿ ದಲಿತ ಸಂಘರ್ಷ ಸಂಘಟನೆಯ ಓಮನ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭಕ್ಕೆ ಮುನ್ನ ಕುಟ್ಟ ಪ್ರೌಢಶಾಲೆಯಿಂದ ಬಸ್ ನಿಲ್ದಾಣದ ಸಮುದಾಯ ಭವನದವರೆಗೆ ಭುವನೇಶ್ವರಿಯ ಚಿತ್ರದೊಂದಿಗೆ ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಮೆರವಣಿಗೆ ನಡೆಸಿದರು.

*ಪೊನ್ನಂಪೇಟೆ ಸಾಯಿ ಶಂಕರ ಶಾಲೆ: ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಮಹನೀಯರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿದ ಬಗ್ಗೆ ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದೂ ನೀನು ಕನ್ನಡಿಗನಾಗಿರು ಎಂಬ ಅಮರ ವಾಣಿಯನ್ನು ಪಾಲಿಸೋಣ. ಕನ್ನಡ ನಮ್ಮ ಭಾಷೆ, ಕವಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ, ಎಂಬ ನಾಡಗೀತೆ ಪಠ್ಯ ಪುಸ್ತಕದಲ್ಲಿ ಓದುವಾಗ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಅತಿಥಿಗಳು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

*ತಾಳತ್‍ಮನೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ನೇತಾಜಿ ಯುವಕ ಮಂಡಲಿ, ತಾಳತ್‍ಮನೆ ನೇತಾಜಿ ಯುವತಿ ಮಂಡಳಿ, ತಾಳತ್‍ಮನೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಮಾಜಿ ಮುಖ್ಯ ಸಲಹೆಗಾರ ಎ.ಎನ್. ರಘು ನೆರವೇರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ.ಬಿ. ಮಹೇಶ್, ಸಹಾಯಕ ಲೆಕ್ಕಾಧಿಕಾರಿ ನೆಹರೂ ಯುವ ಕೇಂದ್ರ ಇವರು ವಹಿಸಿದ್ದರು.

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ತಾಯಿಯೊಂದಿಗೆ ಮಕ್ಕಳು ಹೆಚ್ಚಾಗಿ ಭಾಂದವ್ಯ ಹಾಗೂ ಒಡನಾಟವನ್ನು ಹೊಂದಿರುವದರಿಂದ ನಮ್ಮ ಕನ್ನಡದ ಹೋರಾಟಗಾರರ ಬಗ್ಗೆ ಮತ್ತು ದೂರದರ್ಶನದಲ್ಲಿ ಬರುವ ಇತಿಹಾಸದ ಮಾಹಿತಿಯ ಬಗ್ಗೆ ಅರಿತುಕೊಳ್ಳಲು ತಾಯಿಯಂದಿರು ಹೆಚ್ಚಾಗಿ ಉತ್ತೇಜನ ನೀಡಬೇಕು ಎಂದು ಹಿತನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನವೀನ್ ದೇರಳ, ಅಧ್ಯಕ್ಷರು ತಾಲೂಕು ಯುವ ಒಕ್ಕೂಟ, ಶಿಕ್ಷಕಿಯರಾದ ಭಾರತಿ, ಜಲಜಾ ಭರತ್, ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ಪಾಲ್ಗೊಂಡಿದ್ದರು.

ಪದ್ಮ ರವಿ ನಿರೂಪಿಸಿದರೆ, ಮಂಜುಳ ಆನಂದ್ ಪ್ರಾರ್ಥಿಸಿದರು. ಎನ್.ಎಸ್. ಸಿಂಧು ವಂದಿಸಿದರು. ಇದೇ ಸಂದರ್ಭ ಭ್ರಷ್ಟಾಚಾರ ನಿರ್ಮೂಲನ ಆಂದೋಲನ ಕಾರ್ಯಕ್ರಮದ ಬಗ್ಗೆ ಪ್ರಮಾಣ ವಚನ ಸ್ವೀಕರಿಸಲಾಯಿತು.