ಸೋಮವಾರಪೇಟೆ, ನ. 10: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 7 ದಶಕಗಳು ಕಳೆದರೂ ಸಹ ಇಂದಿಗೂ ಅನೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಸರ್ಕಾರಗಳು ಕೋಟ್ಯಂತರ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆ ನ್ಯಾಯಾಧೀಶರುಗಳೇ ಜನಸಾಮಾನ್ಯ ರೊಂದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಅಭಿಪ್ರಾಯಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನತಾ ನ್ಯಾಯಾಲಯ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಅನೇಕ ಗ್ರಾಮಗಳಲ್ಲಿ ಇಂದಿಗೂ ಕನಿಷ್ಟ ಮೂಲಭೂತ ಸೌಕರ್ಯ ಲಭಿಸಿಲ್ಲ. ಸರ್ಕಾರಗಳು ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಸಮರ್ಪ ಕವಾಗಿ ಅನುಷ್ಠಾನ ಗೊಳ್ಳುತ್ತಿಲ್ಲ. ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂದಿಗೂ ದೇಶ ಸಂಪೂರ್ಣ ಅಭಿವೃದ್ಧಿ ಕಂಡಿಲ್ಲ ಎಂದು ನ್ಯಾಯಾಧೀಶರು ವಿಷಾದಿಸಿದರು.

ಭ್ರಷ್ಟರು ಒಬ್ಬರನ್ನೊಬ್ಬರು ಉಳಿಸಿಕೊಳ್ಳುವತ್ತ ಮುಂದಾಗುತ್ತಿದ್ದಾರೆ. ಪ್ರಾಮಾಣಿಕ ವ್ಯಕ್ತಿಗಳ ಕೊರತೆ ಕಂಡು ಬರುತ್ತಿದೆ. ಆಡಳಿತ ವೈಫಲ್ಯದಿಂದ ನ್ಯಾಯಾಧೀಶರುಗಳೇ ನ್ಯಾಯಾಲಯ ದಿಂದ ಹೊರಬಂದು ಜನತೆಯ ಸಂಕಷ್ಟ ಆಲಿಸುವದು, ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವೋಚ್ಚ ನ್ಯಾಯಾಲಯವು ಜನಹಿತಕ್ಕಾಗಿ ಅನೇಕ ಕಾರ್ಯ ಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಎಲ್ಲರೂ ಉಚಿತ ಕಾನೂನು ಅರಿವಿನ ಸೌಲಭ್ಯ ಪಡೆಯಬೇಕು. ಪ್ರತಿ 2ನೇ ಶನಿವಾರ ಲೋಕ ಅದಾಲತ್ ನಡೆಯಲಿದ್ದು, ಹಲವಷ್ಟು ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದು. ಅವಿದ್ಯಾ ವಂತರಿಗೆ ವಿದ್ಯಾವಂತರು ತಮಗೆ ತಿಳಿದಷ್ಟು ಕಾನೂನಿನ ಅರಿವು ಮೂಡಿಸಬೇಕು. ಸರ್ಕಾರಿ ಕಚೇರಿಗೆ ಆಗಮಿಸುವ ಗ್ರಾಮೀಣ ಪ್ರದೇಶದ ಮಂದಿಗೆ ನೌಕರರು ಉಚಿತ ಕಾನೂನು ಸೇವಾ ಸಮಿತಿಯ ಸೌಲಭ್ಯಗಳನ್ನು ವಿವರಿಸಬೇಕು ಎಂದು ಪರಶುರಾಮ್ ಅವರು ತಿಳಿಸಿದರು.

ಕೊಡಗು ಎಂದರೇ ಸ್ವರ್ಗ. ಇದರ ಮಹತ್ವವನ್ನು ಸರಿಯಾಗಿ ಎಲ್ಲರೂ ಅರ್ಥ ಮಾಡಿಕೊಂಡಿಲ್ಲ. ಇದರ ಮಹತ್ವ ಗೊತ್ತಾಗಬೇಕಾದರೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕಡೆ ಹೋಗಬೇಕು ಎಂದು ತಮ್ಮ ಭಾಷಣದಲ್ಲಿ ಕೊಡಗು ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿದರಲ್ಲದೇ, ಜಿಲ್ಲೆಯ ಪ್ರಕೃತಿ ಯನ್ನು ಉಳಿಸುವಂತೆ ಪರಶುರಾಮ್ ಎಫ್. ದೊಡ್ಡಮನಿಯವರು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್ ಮಾತನಾಡಿ, ಗಾಯಾಳುಗಳು ಮತ್ತು ಅತ್ಯಾಚಾರ ಸಂತ್ರಸ್ಥರಿಗೆ ಕಾನೂನು ಸೇವಾ ಸಮಿತಿ ಮೂಲಕ ಪರಿಹಾರ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಸಂತ್ರಸ್ಥರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ನೀಡುವದು ವೈದ್ಯರ ಕರ್ತವ್ಯವಾಗಿದ್ದು, ಇದನ್ನು ಪಾಲಿಸದಿದ್ದರೆ ಕಾನೂನಿನಡಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವಹಿಸಿ ಮಾತನಾಡಿದರು. ಜನತಾ ನ್ಯಾಯಾಲಯದ ಬಗ್ಗೆ ವಕೀಲ ಮನೋಹರ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.