ಭಾಗಮಂಡಲ, ನ. 10: ಗ್ರಾಮೀಣ ಶಾಲೆಯನ್ನು ಉನ್ನತೀಕರಿಸುವ ಸಿಸ್ಕೋ ಸಂಸ್ಥೆಯ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಬುದ್ಧಿಶಕ್ತಿ ಮತ್ತು ಸ್ಮರಣಶಕ್ತಿ ಹೆಚ್ಚಿ ಜೀವನ ಕೌಶಲ್ಯಗಳನ್ನು ವೃದ್ಧಿಸಲು ನೆರವಾಗಲಿದೆ ಎಂದು ಭಾಗ ಮಂಡಲದ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು. ಸಿಸ್ಕೋ ಸಂಭ್ರಮ ತಂಡದಿಂದ ಸಮೀಪದ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳ ಲಾಗಿದ್ದ ವಿಶೇಷ ಸ್ವಯಂ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿಸ್ಕೊ ಕಂಪೆನಿಯ ಉನ್ನತಾಧಿಕಾರಿ ಧರ್ಮೇಂದ್ರ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಸಿಸ್ಕೋ ಸಂಭ್ರಮ ತಂಡದ ಅಧಿಕಾರಿಗಳು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಗ್ರಾಮೀಣ ಪ್ರದೇಶದ ಪ್ರೌಢ ಶಾಲೆಗಳು ವಿವಿಧ ಸೌಲಭ್ಯಗಳಿಂದ ವಂಚಿತವಾಗಿರುವದನ್ನು ಮನಗಂಡ ಸಿಸ್ಕೋ ಸಾಫ್ಟ್‍ವೇರ್ ಬಹುರಾಷ್ಟ್ರೀಯ ಕಂಪೆನಿಯು ವಿದ್ಯಾಸಂಸ್ಥೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಂಪ್ಯೂಟರ್‍ಗಳು, ಲ್ಯಾಪ್‍ಟಾಪ್‍ಗಳು, ಪ್ರೊಜೆಕ್ಟರ್, ಕ್ರೀಡಾ ಸಾಮಗ್ರಿಗಳು ಶಾಲಾ ಕೊಠಡಿಗಳಿಗೆ ವಿದ್ಯುತ್ ಸಾಮಗ್ರಿ ಮತ್ತಿತರ ಸೌಲಭ್ಯಗಳನ್ನು ನೀಡಿತ್ತು. ಇದೀಗ ಕಂಪೆನಿಯ ಅಧಿಕಾರಿಗಳು ನಡೆಸಿಕೊಟ್ಟ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಹೊಸಚೇತನ ಮೂಡಿಸಿತು.

ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಎಂ.ಕೆ. ಜಾನಕಿ ಹಿರಿಯ ಸಹಾಯಕ ಅಧ್ಯಾಪಕಿ ವಿ.ವಿ. ಪೂರ್ಣಿಮಾ, ವಿದ್ಯಾಸಂಸ್ಥೆಯ ನಿರ್ದೇಶಕಿ ಪುಷ್ಪಾ, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.