ವೀರಾಜಪೇಟೆ, ನ. 10: ‘‘ಕನ್ನಡದ ಅಳಿವು-ಉಳಿವು ಕನ್ನಡಿಗರ ಕೈಯಲ್ಲೇ ಇದೆ. ಕನ್ನಡ ಕನ್ನಡಿಗರ ಹೃದಯದ ಭಾಷೆಯಾಗಲಿ’’ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಲೋಕೇಶ್ ಸಾಗರ್ ಹೇಳಿದ್ದಾರೆ.

ವೀರಾಜಪೇಟೆಗೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನಗೋಷ್ಠಿಯ 172ನೇ ಕಿರಣದಲ್ಲಿ ‘ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳ್ಳಲು ಇರುವ ತೊಡಕುಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಕನ್ನಡವನ್ನು ಉಳಿಸುವ ಕೆಲಸ ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸಬಾರದು. ಯಾವದೇ ಮಾತೃಭಾಷೆ ನಿರ್ಲಕ್ಷ್ಯಕ್ಕೆ ಒಳಗಾದಲ್ಲಿ ಅದು ಜನ- ಮಾನಸಗಳಿಂದ ದೂರವಾಗುತ್ತದೆ. ಆಡಳಿತದಲ್ಲಿ ಕನ್ನಡ ಜಾರಿಗೊಳ್ಳ ಬೇಕಾದಲ್ಲಿ ಸರಕಾರಗಳಿಗೆ ಈ ವಿಷಯದಲ್ಲಿ ಇಚ್ಛಾಶಕ್ತಿ ಇರಬೇಕು. ಪ್ರತಿಯೊಬ್ಬರೂ ನೈಜ ಕನ್ನಡಿಗ ರಾಗಬೇಕು ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ದಿವ್ಯಸಾನ್ನಿಧ್ಯ ವಹಿಸಿದ್ದ ಮಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡುತ್ತಾ, ಕನ್ನಡ ವೆಂಬದು ಕೇವಲ ಒಂದು ಭಾಷೆ ಯಲ್ಲ. ಅದೊಂದು ಸಂಸ್ಕøತಿ ಯಾಗಿದೆ. ಸಂಸ್ಕøತಿ ಒಂದು ಭಾಷೆಗೆ ಸೀಮಿತವಾಗುವದಿಲ್ಲ. ಕನ್ನಡ ಪರಂಪರೆಯನ್ನೂ ಅದು ಪ್ರತಿಪಾದಿಸುವ ಜೀವನ ಶೈಲಿಯನ್ನೂ ನಾವು ರೂಢಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡ ಉಳಿಯುತ್ತದೆ ಎಂದರು. ಮಂಜುನಾಥ್ ಸ್ವಾಗತಿಸಿ ದರು. ಶಿಕ್ಷಕ ಲೋಕೇಶ್ ನಿರೂಪಿಸಿದರು. ಬಿ.ಎಸ್. ದೇವರ್ ವಂದಿಸಿದರು.