ವೀರಾಜಪೇಟೆ, ನ. 10: ವೀರಾಜಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಜಿ.ಬೋಪಯ್ಯ ಅವರು ಟಿಪ್ಪುವನ್ನು ಹೀನಾಯವಾಗಿ ಟೀಕಿಸಿದರಲ್ಲದೆ ಟಿಪ್ಪುವಿನ ಜಯಂತಿಯನ್ನು ಬಹಿಷ್ಕರಿಸುವದಾಗಿ ಹೇಳಿದರು.ಟಿಪ್ಪು ಸುಲ್ತಾನ್ ಕೊಡಗಿಗೆ ದಂಡೆತ್ತಿ ಬಂದಾಗ ಸುಮಾರು 310 ಹಿಂದೂ ದೇವಾಲಯಗಳನ್ನು ನಾಶ ಪಡಿಸಿದ್ದಾನೆ. ಕೊಡಗಿನ ದೇವಟಿಪರಂಬಿನ ಹತ್ಯಾಕಾಂಡ ಇದಕ್ಕೆ ಉದಾಹರಣೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಮತಾಂತರ ಮಾಡುವದರಲ್ಲಿ ಆತ ಅಗ್ರ ಗಣ್ಯನಾಗಿದ್ದನು. ರಾಜ್ಯ ಸರಕಾರ ತನ್ನ ಸ್ವಾರ್ಥ ಸಾಧನೆಗಾಗಿ ಹಾಗೂ ಅಲ್ಪ ಸಂಖ್ಯಾತರನ್ನು ಓಲೈಸುವ ಸಲುವಾಗಿ ಟಿಪ್ಪು ಜಯಂತಿಯನ್ನು ವೈಭವೀಕರಿಸುತ್ತಿರುವದು ಸರಿಯಲ್ಲ ಎಂದು ಟಿಪ್ಪುವನ್ನು ಟೀಕೆ ಮಾಡಿದ

(ಮೊದಲ ಪುಟದಿಂದ) ನಂತರ ಕೆ.ಜಿ.ಬೋಪಯ್ಯ ಅವರು ಟಿಪ್ಪುವಿನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದರು.

ಶಾಸಕ ಬೋಪಯ್ಯ ಅವರೊಂದಿಗೆ ವೇದಿಕೆಯಲ್ಲಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್,ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಆಹ್ವಾನಿತರಾಗಿ ಸಭಾಂಗಣದಲ್ಲಿದ್ದ ಆರ್ ಎಂ ಸಿ ಅಧ್ಯಕ್ಷ ಸುವಿನ್ ಗಣಪತಿ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮತ್ತಿತರ ಪ್ರಮುಖರು ಟಿಪ್ಪು ಜಯಂತಿಗೆ ಧಿಕ್ಕಾರ ಕೂಗಿ ಹೊರ ಬಂದರು.

ತಾಲೂಕು ಕಚೇರಿಯ ನೆಲ ಅಂತಸ್ತಿನ ಕೆಳಗಿನ ಗೇಟ್ ಬಳಿ ಇದ್ದ ಡಿ.ವೈಎಸ್‍ಪಿ ನಾಗಪ್ಪ ಅವರ ಆದೇಶದಂತೆ ಪೊಲೀಸರು ಶಾಸಕ ಬೋಪಯ್ಯ ಅವರೊಂದಿಗಿದ್ದ 12 ಮಂದಿ ಮಹಿಳೆಯರು ಹಾಗೂ 21 ಮಂದಿ ಪುರುಷರು ಸೇರಿದಂತೆ ಒಟ್ಟು 33 ಮಂದಿಯನ್ನು ಬಂಧಿಸಿದರು.

33 ಮಂದಿಯನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದ ಮಹಿಳಾ ಸಮಾಜದಲ್ಲಿರಿಸಿದರು. ಕೆಲ ಗಂಟೆಗಳ ನಂತರ ಜಾಮೀನಿನ ಮೇರೆ ಎಲ್ಲರನ್ನು ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಇ.ಸಿ.ಜೀವನ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್, ಬಿ.ಇ.ಒ ಲೋಕೇಶ್ ಹಾಜರಿದ್ದರು.

ಕಾರ್ಯಕ್ರಮದಿಂದ ಅತಿಥಿಗಳು ಹಾಗೂ ಪ್ರಮುಖರು ಹೊರ ನಡೆದ ನಂತರ ಟಿಪ್ಪು ಜಯಂತಿ ಪರವಾಗಿದ್ದವರು ತಾಲೂಕು ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು..

ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಹಾಗೂ ಜೆಡಿಎಸ್. ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್ ಮಾತನಾಡಿ ಶತಮಾನಗಳ ಹಿಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಸಮಕಾಲೀನರು ಹಾಗೂ ರೈತರ ಬಗ್ಗೆ ಕಾಳಜಿ ಇದ್ದು ಆ ಸಮಯದಲ್ಲಿ ರೈತರ ಪರವಾಗಿ.ಭೂ ಸುಧಾರಣೆಗಾಗಿ ಒತ್ತು ಕೊಟ್ಟವರು ಎಂದರು.

ಈ ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶೀಬಾ ಪ್ರಥ್ವಿನಾಥ್. ಬಿಳುಗುಂದ ಗ್ರಾಮ ಪಂಚಾಯಿತಿ ಸದಸ್ಯೆ ಹಲೀಮಾ, ತಾಲೂಕು ತಹಶೀಲ್ದಾರ್ ಗೋವಿಂದರಾಜು, ತಾಲೂಕು ಪಂಚಾಯಿತಿ ಅಧಿಕಾರಿ ಜಯಣ್ಣ, ಬಿ.ಇ.ಓ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರ ತಾಕೀತು

ಶಾಸಕ ಬೋಪಯ್ಯ ಅವರೊಂದಿಗೆ ಸಮಾರಂಭದ ಸಭಾಂಗಣಕ್ಕೆ ಪ್ರವೇಶಿಸುತ್ತಿದ್ದಾಗ ಮಹಿಳೆಯರನ್ನು ತಪಾಸಣೆ ಮಾಡಲು ಪೊಲೀಸರು ಮುಂದಾದರು.

ಆಗ ರೀನಾ ಪ್ರಕಾಶ್, ಎಂ.ಕೆ.ದೇಚಮ್ಮ, ಇತರ ಮಹಿಳೆಯರು ಮೈ ಮುಟ್ಟದಂತೆ ಪೊಲೀಸರಿಗೆ ತಾಕೀತು ಮಾಡಿದರಲ್ಲದೆ, ಇದಕ್ಕೆ ಅಗತ್ಯ ಯಂತ್ರವನ್ನು ಬಳಸಲು ಸೂಚಿಸಿದರು.

ಜಯಂತಿಯ ಪರ ವಿರೋಧ ಪ್ರಯುಕ್ತ ತಾಲೂಕು ಕಚೇರಿ ಮುಂದೆ ಡಿವೈಎಸ್ಪಿ ನಾಗಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.