ಚೆಟ್ಟಳ್ಳಿ, ಅ. 23 : ರಾಜ್ಯ ಸರಕಾರ ಜಿಲ್ಲೆಗೆ ಬಗ್ಗೆ ಹಲವು ವಿಶೇಷ ಅನುದಾನಗಳನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದು ಸರಕಾರದಿಂದ ಬರುವ ಅನುದಾನಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸದುಪಯೋಗಗೊಳಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು. ಚೆಟ್ಟಳ್ಳಿಯಲ್ಲಿ ಮುಖ್ಯ ಮಂತ್ರಿಗಳ ಅನುದಾನದಿಂದ ಬಿಡುಗಡೆಯಾದ 20 ಲಕ್ಷದ ರಸ್ತೆ ಕಾಮಗಾರಿಗೆ ಭುಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಿದ್ದರಾಮಯ್ಯನವರಿಗೆ ಕೊಡಗಿನ ಬಗ್ಗೆ ಹೆಚ್ಚಿನ ಕಾಳಜಿಯಿದ್ದು ಈವರೆಗೆ ಹಲವು ಅನುದಾನಗಳನ್ನು ನೀಡಿದ್ದಾರೆ. ರಾಜ್ಯವನ್ನು ಹಸಿವು ಮುಕ್ತವನ್ನಾಗಿಸುವ ಕನಸನ್ನು ನನಸು ಮಾಡಿದ್ದಾರೆ. ಕೊಡಗಿನ ಮಹಿಳಾ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದು ಅದರ ಋಣವನ್ನು ತೀರಿಸಬೇಕೆಂದರೆ ನ್ಯಾಯಯುತ ಕಾರ್ಯವನ್ನು ಮಾಡಬೇಕಿದೆ ಯೆಂದರು ಸಾರ್ವಜನಿಕರ ಕುಂದು-ಕೊರತೆ, ಕೆಲಸ-ಕಾರ್ಯಗಳ ಬಗ್ಗೆ ಉಸ್ತುವಾರಿ ಸಚಿವರು ಅಥವಾ ತನಗೆ ಮಾಹಿತಿ ನೀಡಿದರೆ ಬಗೆ ಹರಿಸುವದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ವತ್ಸಲ, ವಲಯ ಅಧ್ಯಕ್ಷ ಪುತ್ತರಿರ ಪಪ್ಪುತಿಮ್ಮಯ್ಯ, ಗ್ರಾ. ಪಂ. ಮಾಜಿ ಅಧ್ಯಕ್ಷ ತೀರ್ಥಕುಮಾರ್, ಸದಸ್ಯರಾದ ಮೊಹಮದ್ ರಫಿ, ಮೇರಿಅಂಬುದಾಸ್, ಸಿಂದೂ, ಪ್ರಭಾಕರ, ಚೆಟ್ಟಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್, ಕಾರ್ಯದರ್ಶಿ ಇಸ್ಮಾಯಿಲ್, ಮರಗೋಡು ಕ್ಷೇತ್ರದ ತಾ. ಪಂ. ಸದಸ್ಯ ಅಪ್ರು ರವೀಂದ್ರ, ವಾಲ್ನೂರು ಕ್ಷೇತ್ರದ ಸದಸ್ಯೆ ಸುಹಾದಅಶ್ರಫ್, ಆನಂದ, ಕೊಂಗೇಟಿರ ಬೋಪಯ್ಯ, ಕೊಂಗೇಟಿರ ಕುಮಾರ, ಕೊಂಗೇಟಿರ ಅಚ್ಚಪ್ಪ, ಶಶಿ ಮಂಜುನಾಥ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು. ಚೆಟ್ಟಳ್ಳಿ ವಲಯ ಕಾಂಗ್ರೆಸ್ ಕಾರ್ಯದರ್ಶಿ ಜುಬೇರ್ ಸ್ವಾಗತಿಸಿ, ವಂದಿಸಿದರು.