ಶ್ರೀಮಂಗಲ, ಅ. 23: ಕೊಡವ ಸಂಸ್ಕøತಿ, ಆಚಾರ-ವಿಚಾರ, ಉಡುಗೆ ತೊಡುಗೆ, ಪದ್ಧತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವದು ಹಾಗೂ ಮುಂದಿನ ಪೀಳಿಗೆಗೆ ಅರಿವು ಮೂಡಿ ಸುವದು ಕೊಡವ ಸಮಾಜಗಳದ್ದೇ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ “ಚಂಗ್ರಾಂದಿ-ಪತ್ತಾಲೋದಿ”ಯನ್ನು ನಡೆಸಲಾಗುತ್ತಿದೆ. ಇದಕ್ಕೆ ಜನಾಂಗದ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ನಿರ್ದೇಶಕರು ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ಮಾಣೀರ ವಿಜಯ ನಂಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಟಿ. ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ ಹಾಗೂ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಚಂಗ್ರಾಂದಿ- ಪತ್ತಾಲೋದಿ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಚೊಟ್ಟೆಯಂಡಮಾಡ ಬೊಸು ವಿಶ್ವನಾಥ್ ಮಾತನಾಡಿ ನಾವೆಲ್ಲರೂ ಗೌರಿ ಗಣೇಶ, ದಸರಾ ಉತ್ಸವಗಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ರಂಗು ರಂಗಿನ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತೇವೆ. ಆದರೆ, ನಮ್ಮದೇ ನಾಡಿನಲ್ಲಿ ತೀರ್ಥ ರೂಪಿಣಿಯಾಗಿ ವರ್ಷಂಪ್ರತಿ ದರ್ಶನ ನೀಡುವ ಪವಿತ್ರ ಕಾವೇರಿ ಮಾತೆಯನ್ನು ಪೂಜಿಸಿ ಕ್ರಮಬದ್ಧವಾಗಿ ಹತ್ತು ದಿನಗಳವರೆಗೆ ಕಾವೇರಿ ಜಾತ್ರೆಯನ್ನು ಆಚರಣೆ ಮಾಡಲು ಹಿಂದೇಟು ಹಾಕುತ್ತಿರುವದು ಈ ನಾಡಿನ ದುರಂತ ಎಂದರು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಖಜಾಂಚಿ ಚೊಟ್ಟೆಯಂಡಮಾಡ ವಿಶು ರಂಜಿ ಮಾತನಾಡಿ ಮೂರು ನಾಡಿಗೆ ಅಂದರೆ ಸುಮಾರು 18 ಗ್ರಾಮಗಳಿಗೆ ಒಳಪಟ್ಟಿದ್ದಾಗಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜಕ್ಕೆ ಇದೀಗ ಐದು ಗ್ರಾಮಗಳು ಮಾತ್ರ ಸಕ್ರಿಯವಾಗಿ ಭಾಗವಹಿಸುತ್ತಿದೆ. ನಾಡಿನ ಎಲ್ಲರೂ ಭಾಗವಹಿಸಿ ಕೊಡವ ಸಮಾಜದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸಹಕರಿಸಬೇಕು ಎಂದರು.

ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಪ್ರಾಯೋಜಕರಾದ ಉಳುವಂಗಡ ದತ್ತ ಹರೀಶ್ ಉಪಸ್ಥಿತರಿದ್ದರು. ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ 45 ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು.