ಮಡಿಕೇರಿ, ಅ. 23: ಹಿರಿಯರು ಅನೇಕ ಕನಸುಗಳೊಂದಿಗೆ ಭವಿಷ್ಯದ ಸಲುವಾಗಿ ಅಂದು ಕಟ್ಟಿ ಬೆಳೆಸಿರುವ ಕೊಡಗಿನ ಹಲವಷ್ಟು ಸಹಕಾರ ಸಂಸ್ಥೆಗಳು ಇಂದು ಮೋಸದ ಬಲೆಯೊಳಗೆ ಸಿಲುಕಿ ನಲುಗುವದ ರೊಂದಿಗೆ ಜನವಲಯದಲ್ಲಿ ವಿಶ್ವಾಸ ಕಳೆದುಕೊಳ್ಳ ತೊಡಗಿದೆ. ಇಂಥ ಸುಳಿಯಲ್ಲಿ ಈ ನಾಡಿನ ಪ್ರತಿಷ್ಠಿತ ಸಂಸ್ಥೆಗಳೂ ಸೇರಿಕೊಂಡಿವೆ.

ಒಂದೊಮ್ಮೆ ಕೊಡಗಿನಲ್ಲಿ ಯಥೇಚ್ಛ ಏಲಕ್ಕಿ ಬೆಳೆಯುವದರೊಂದಿಗೆ ಈ ‘ಸಂಬಾರ ರಾಣಿ’ಯ ಅಭ್ಯುದಯಕ್ಕಾಗಿಯೇ ಸ್ಥಾಪಿಸಲ್ಪಟ್ಟಿರುವ ಕೊಡಗು ಏಲಕ್ಕಿ ಬೆಳೆಗಾರರ ಸಹಕಾರ ಸಂಘ ಮೂರು ದಶಕಗಳ ಹಿಂದೆ ತನ್ನ ವಹಿವಾಟುವಿನಿಂದ ಮೋಸಗೊಂಡು ಇಂದಿಗೂ ದೃಢತೆ ಕಾಯ್ದುಕೊಳ್ಳವದು ಸಾಧ್ಯವಾಗಿಲ್ಲ. ಅಂತೆಯೇ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಕೂಡ ಎರಡು ದಶಕಗಳ ಹಿಂದೆಯೇ ತನ್ನ ವೈಭವ ಕಳೆದು ಕೊಂಡಿದ್ದಲ್ಲದೆ, ಬೆಳೆಗಾರರ ಹಿತವನ್ನು ಕಾಯ್ದು ಕೊಳ್ಳಲಾರದೆ, ಆರ್ಥಿಕ ಹೊಡೆತಕ್ಕೆ ಸಿಲುಕಿ ಸಾಕಷ್ಟು ಆಸ್ತಿಯನ್ನು ಮಾರಾಟಗೊಳಿಸುವ ಮೂಲಕ ತನ್ನ ಪ್ರತಿಷ್ಠಿತ ಹೆಸರು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಗೋಣಿಕೊಪ್ಪಲುವಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘವು ಕೂಡ ಅನೇಕ ಏಳುಬೀಳುಗಳ ನಡುವೆ ಆರ್ಥಿಕ ಸ್ಥಿರತೆ ಕಾಪಾಡಿ ಕೊಳ್ಳುವಲ್ಲಿ ಈತ ವಿವಿಧ ಹಣ್ಣಿನ ರಸ ತಯಾರಿ ಮತ್ತು ಮಾರಾಟದಿಂದ ಚೇತರಿಸಿಕೊಳ್ಳುತ್ತಿರುವ ಆಶಾಭಾವನೆ ಮೂಡಿದೆ.

ಮೋಸದ ಜಾಲ : ಈ ನಡುವೆ ಒಂದೊಮ್ಮೆ ಜಿಲ್ಲೆಯ ರೈತರಿಗೆ ಆಸರೆಯಾಗಿದ್ದ ಗ್ರಾಮೀಣ ದವಸ ಭಂಡಾರಗಳು ಕಣ್ಮರೆಯಾಗುವದರೊಂದಿಗೆ ಶರವೇಗದಿಂದ ಬೆಳೆದು ನಿಂತಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳು ಈಗಿನ ಪರಿಸ್ಥಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅಲ್ಲಲ್ಲಿ ಮೋಸದ ಜಾಲದೊಳಗೆ ಸಿಲುಕಿರುವ ಆರೋಪಗಳು ಕೇಳಿಬರ ತೊಡಗಿದೆ. ಇಂಥಹ ಅನೇಕ ಸಂಸ್ಥೆಗಳಲ್ಲಿ ಸಾಲ ನೀಡುವಲ್ಲಿ ಮತ್ತು ಸಾಲ ಪಡೆಯುವಲ್ಲಿ ವಿಭಿನ್ನ ರೀತಿಯಲ್ಲಿ ಮೋಸವಾಗುತ್ತಿರುವ ಬಗ್ಗೆ ರೈತರಿಂದ ಸಾಕಷ್ಟು ಆರೋಪಗಳಿದ್ದರೂ, ಅಂಥಹ ಸಂದರ್ಭ ಆಯಾ ಸಂಘದ ಆಡಳಿತ ಮಂಡಳಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆ ಹರಿಸುತ್ತಿದ್ದದ್ದು ವಾಸ್ತವ. ಪ್ರಸಕ್ತ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಪ್ರವೇಶಿಸಿರುವ ವಿಯೆಟ್ನಾಂ ಕಾಳುಮೆಣಸು ವಂಚನೆ ಹಗರಣ, ಚೆಯ್ಯಂಡಾಣೆಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾವಿರಾರು ಮೂಟೆ ಗೊಬ್ಬರ ನಾಪತ್ತೆ ಹಗರಣ, ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಕಲಿ ಚಿನ್ನ ಪ್ರಕರಣ; ಕುಶಾಲನಗರ ಹಾಗೂ ಗುಡ್ಡೆಹೊಸೂರು ಸಹಕಾರ ಸಂಸ್ಥೆಗಳಲ್ಲಿ ನೌಕರರು ಹಣ ವಂಚಿಸಿ ತಲೆಮರೆಸಿಕೊಂಡಿರುವ ಸರಣಿ ಹಗರಣಗಳು ಸಹಕಾರ ಸಂಸ್ಥೆಗಳ ಮೇಲಿನ ಈ ಹಿಂದಿನ ವಿಶ್ವಾಸ ಅಥವಾ ನಂಬಿಕೆಗೆ ಸಾಕಷ್ಟು ಪೆಟ್ಟು ನೀಡುವಂತಿವೆ.

ಬ್ಯಾಂಕ್‍ನಲ್ಲೂ ವಂಚನೆ : ಕೆಲವು ವರ್ಷ ಹಿಂದೆ ಕುಶಾಲನಗರದಲ್ಲಿ ದಿಢೀರ್ ಕಾಣಿಸಿಕೊಂಡು, ಅಷ್ಟೇ ವೇಗವಾಗಿ ನಾಪತ್ತೆಯಾಗಿರುವ ರಾಹುಲ್ ಪೀಟರ್ ಎಂಬ ಅನಾಮಿಕನೊಬ್ಬ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಲಕ್ಷಾಂತರ ರೂ. ವಂಚಿಸಿದ್ದ. ಬ್ಯಾಂಕ್ ಮಂದಿ ಕೂಡ ಇಂಥಹ ಆಮಿಷಕ್ಕೆ ಸಿಲುಕಿ ಮೋಸ ಹೋಗಿದ್ದರೂ, ಅನಂತರ ಜಾಮೀನು ನೀಡಿದವರ ಬೆನ್ನೇರಿ ಹಣ ವಸೂಲಿಗೆ ಮುಂದಾಗಿತ್ತು.

ಇಲ್ಲಿ ಕಾಲ ಬದಲಾಗುತ್ತಿರುವಂತೆಯೇ ವಿಭಿನ್ನ ರೀತಿಯಲ್ಲಿ ಇತರೆಡೆಗಳಲ್ಲಿ ಕಂಡು, ಕೇಳುತ್ತಿದ್ದ ಮೋಸದ ಜಾಲವನ್ನು ಕೊಡಗಿನಲ್ಲಿಯೂ ಕಾಣುವಂತಾಗಿದೆ. ಒಂದೊಮ್ಮೆ ಎಲ್ಲವೂ ನಂಬಿಕೆಯಿಂದ ನಡೆದುಕೊಂಡು ಬರುತ್ತಿದ್ದ ಕಾವೇರಿ ನಾಡಿನಲ್ಲಿ ಇಂದು ಪ್ರತಿನಿತ್ಯ ಹೆಂಗಳೆಯರ ಮಾಂಗಲ್ಯ ಸರ ಇತ್ಯಾದಿ ಅಪಹರಿಸುವಷ್ಟರ ಮಟ್ಟಿಗೆ ಮೋಸದ ಪರಿ ಗೋಚರಿಸ ತೊಡಗಿರುವದು ಆಘಾತಕಾರಿ ಸಂಗತಿ. ಈ ದಿಸೆಯಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರು ವಂಚನೆ, ಮೋಸ ಹೋಗುವ ಮುನ್ನ ಎಚ್ಚೆತ್ತು ಕೊಳ್ಳಬೇಕಿದೆ. ಹಾಗೂ ಎಲ್ಲರ ಜವಾಬ್ದಾರಿ ಕೂಡ ಆಗಿದೆ.