ವೀರಾಜಪೇಟೆ, ಅ. 23: ಅನೇಕ ವರ್ಷಗಳಿಂದಲೂ ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿರುವ ನೆಹರೂ ನಗರದ ನಿವಾಸಿಗಳಿಗಾಗಿ ನೂತನ ತೆರದ ಬಾವಿಗೆ ಮೋಟರ್ ಅಳವಡಿಸಿ ಸುಮಾರು 100 ಕುಟುಂಬಗಳಿಗೆ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಹೇಳಿದರು.

ಇಲ್ಲಿನ ನೆಹರು ನಗರದ ನಿವಾಸಿಗಳಿಗೆ ಬರಪರಿಹಾರದಡಿಯಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ಕಿರುನೀರು ಯೋಜನೆಯಡಿ ಕುಡಿಯುವ ನೀರು ಸೌಲಭ್ಯಕ್ಕೆ ಸ್ವಿಚ್ ಆನ್ ಮಾಡಿ ಚಾಲನೆ ನೀಡಿದ ಅಧ್ಯಕ್ಷರು ಮಾತನಾಡಿ, ತೆರೆದ ಬಾವಿಗೆ 63 ಕೆ.ವಿ. ವಿದ್ಯುತ್ ಪರಿವರ್ತಕ ಅಳವಡಿಸಿ ಕುಡಿಯುವ ನೀರಿನ ಸೌಲಭ್ಯ ನೀಡಲಾಗಿದ್ದು. ಬೇಸಿಗೆ ಕಾಲದಲ್ಲಿ ಸಮಸ್ಯೆಯಾಗದಂತೆ ಮುಂದಿನ ದಿನದಲ್ಲಿ ಟ್ಯಾಂಕ್ ನಿರ್ಮಿಸಿ ಮನೆ ಮನೆಗೆ ನೀರಿನ ಸೌಲಭ್ಯ ಒದಗಿಸಲಾಗುವದು ಎಂದರು.

ಸದಸ್ಯ ಎಸ್.ಹೆಚ್. ಮೈನೂದ್ಧಿನ್ ಮಾತನಾಡಿ ಸರ್ಕಾರದಿಂದ ನೀಡಿರುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಕೊಳ್ಳುವಂತಾಗಬೇಕು ಎಂದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಹೇಮ್ ಕುಮಾರ್, ಸದಸ್ಯರುಗಳಾದ ಸಚಿನ್, ಎಸ್.ಹೆಚ್.ಮತೀನ್, ಬಿ.ಡಿ.ಸುನೀತಾ, ಚಂದ್ರಶೇಖರ್, ಸರಿತ, .ರಾಜೇಶ್, ಮಹ್ಮದ್ ರಾಫಿ, ಸ್ಥಳೀಯರಾದ ಜೋಕಿಂ ರಾಡ್ರೀಗಸ್, ಹಾಗೂ ನೆಹರು ನಗರದ ಪ್ರಮುಖರು ಉಪಸ್ಥಿತರಿದ್ದರು.