ಸುಂಟಿಕೊಪ್ಪ, ಅ. 9: ಕಾಳು ಮೆಣಸು ಧಾರಣೆ ಕುಸಿತ, ಆಕಾಲಿಕ ಮಳೆಯಿಂದ ಗಿಡದಲ್ಲೆ ಕೊಳೆಯುತ್ತಿ ರುವ ಕಾಫಿ ಹಣ್ಣು, ಹವಾಮಾನ ವೈಪರೀತ್ಯದಿಂದ ಫಸಲಿನ ಇಳಿಮುಖ ದಿಂದ ಬೆಳೆಗಾರರು ಮೊಗದಲ್ಲಿ ಪ್ರಸಕ್ತ ಸಾಲಿನಲ್ಲಿ ಅತಂಕದ ಛಾಯೆ ಮನೆ ಮಾಡಿದೆ.
ಕಳೆದ ವರ್ಷ ಕರಿಮೆಣಸು ಬೆಲೆ ಸರಾಸರಿ 1 ಕೆಜಿಗೆ 700 ರೂ ಲಭಿಸಿತ್ತು. ಅಲ್ಲದೆ ರೊಬಾಸ್ಟಾ ಧಾರಣೆಯಲ್ಲಿ ಏರುಪೇರಾಗಿದ್ದರೂ ಬೆಳೆಗಾರರಿಗೆ ದೊಡ್ಡ ಹೊಡೆತ ಬಿದ್ದಿರಲಿಲ್ಲ. ಈ ವರ್ಷದಿಂದ ಅಕ್ಟೋಬರ್‍ನಲ್ಲೂ ಮಳೆ ಬೀಳುತ್ತಿರುವದರಿಂದ ಸೋಮವಾರ ಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಅರೆಬಿಕಾ ಕಾಫಿಯನ್ನೇ ಬೆಳೆಯುತ್ತಿರುವ ಬೆಳೆಗಾರರಿಗೆ ನಷ್ಟವುಂಟಾಗುತ್ತಿದೆ. ಕಾಫಿಗಿಡದಲ್ಲೇ ಕಾಫಿ ಹಣ್ಣಾಗಿ ಕೊಳೆಯುತ್ತಿದೆ. ಹಣ್ಣಾದ ಕಾಫಿಯನ್ನು ಕೊಯ್ದು ಒಣಗಿಸಲು ಆಗದೆ ಗಿಡದಲ್ಲೇ ಬಿಡಲೂ ಆಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಮತೊಂದೆಡೆ ರೋಬಾಸ್ಟಾ ಕಾಫಿ ಮಳೆಯಿಂದ ಕೊಳೆತು ಬೀಳುತ್ತಿದೆ.
ವಿಯಟ್ನಾಂನಿಂದ ಆಮದು ಮಾಡಿಕೊಂಡ ಕರಿಮೆಣಸನ್ನು ಕೊಡಗಿನ ಫಲವತ್ತಾದ ಕಾಳು ಮೆಣಸಿನೊಂದಿಗೆ ಕಲಬೆರಕೆ ಮಾಡಿ ವರ್ತಕರು ಮಾರಾಟ ಮಾಡುತ್ತಿರುವ ದರಿಂದ ಕಾಳುಮೆಣಸಿನ ಧಾರಣೆ 1 ಕೆ.ಜಿ.ಗೆ 380 ರೂಗೆ ನಿಂತಿದೆ.
ಕಳೆದ ವರ್ಷ ಕಾಳು ಮೆಣಸನ್ನು ಕೆಲ ಮಧ್ಯಮ ಹಾಗೂದೊಡ್ಡ ಕಾಫಿ ಬೆಳೆಗಾರರು ಮತ್ತಷ್ಟು ಬೆಲೆ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದು, ಈಗ ದರ ಕುಸಿತದಿಂದ ಮಾರಾಟ ಮಾಡಲಾಗದೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಕೊಡಗಿನ ಕಾಳು ಮೆಣಸಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಗೋಣಿಕೊಪ್ಪಲು ಎಪಿಎಂಸಿಯಲ್ಲಿ ವಿಯಟ್ನಾಂಮಿನ ಕಾಳುಮೆಣಸು ಆಮದು ಮಾಡಿಕೊಂಡಿರು ವದರಿಂದ ಕೊಡಗಿನ ಕಾಳುಮೆಣಸು ದರ ಪಾತಳಕ್ಕೆ ಕುಸಿದಿದೆ. ಹೊರದೇಶದಲ್ಲೂ ಇದರಿಂದ ಕೊಡಗಿನ ಕಾಳು ಮೆಣಸಿಗೆ ಬೇಡಿಕೆ ಕಡಿಮೆಯಾಗಿದೆ. ವಿಯಟ್ನಾಂ ನ ಕಾಳುಮೆಣಸು ಕೊಡಗಿನ ಕಾಳುಮೆಣಸಿನ ಯಾವದೇ ರೀತಿಯಲ್ಲಿ ಗುಣಮಟ್ಟದಲ್ಲಿ ಸರಿಸಮಮಾನ ವಾಗಿರುವದಿಲ್ಲ ತೂಕವು ಕಡಿಮೆ ಇದೆ ಎಂದು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.