ಕುಶಾಲನಗರ, ಅ.9: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಅರಣ್ಯ ಇಲಾಖೆಯ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ ಹೇಳಿದರು. ಕಾವೇರಿ ನಿಸರ್ಗಧಾಮದಲ್ಲಿ ನಡೆದ ಅರಣ್ಯ ಇಲಾಖೆಯ ಕೊಡಗು ವೃತ್ತದ ಆಶ್ರಂiÀiದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಸಹಯೋಗದೊಂದಿಗೆ “ನಮ್ಮ ನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ” ಎಂಬ ಘೋಷಣೆಯಡಿ ಸಂಘಟಿಸಿದ್ದ 63ನೇ ವಿಶ್ವ ವನ್ಯಜೀವಿ ಸಪ್ತಾಹ - 2017 ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಪ್ರತಿಯೊಬ್ಬರೂ ನೆಲ-ಜಲ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯೊಂದಿಗೆ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮ್ಕುಮಾರ್ ಮಾತನಾಡಿ, ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ತಪ್ಪಿಸಬೇಕಿದೆ ಎಂದರು.
ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಪ್ರಕೃತಿ, ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲೆ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಶ್ವ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ , ಪರಿಸರ, ಪ್ರಾಣಿ ವೈವಿಧ್ಯ ಕುರಿತಂತೆ ಗುಡ್ಡೆಹೊಸುರಿನ ಗುಡ್ಡೆಮನೆ ವಿಶ್ವಕುಮಾರ್ ಅವರು ಪ್ರದರ್ಶಿಸಿದ ಛಾಯಚಿತ್ರ ಪ್ರದರ್ಶನ ಪ್ರವಾಸಿಗರ ಗಮನ ಸೆಳೆಯಿತು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್, ಗಂಧದಕೋಟೆಯ ಅರಣ್ಯ ರಕ್ಷಕ ತರಬೇತಿ ಕೇಂದ್ರದ ಪ್ರಾಂಶುಪಾಲ ಎಂ. ಶಿವಪ್ಪ, ಪ್ರೊಬೆಷನರಿ ಅಧಿಕಾರಿ ಎಂ.ಬಿ.ಶೋಭಾ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.