ಕುಶಾಲನಗರ, ಅ 9 : ದಲಿತ ಕುಟುಂಬದ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ. ಬಿ. ರಾಜು ಆಗ್ರಹಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹೆಬ್ಬಾಲೆ ಸಮೀಪದ ಕಾಸಲಗೋಡು ಗ್ರಾಮದ ನಿವಾಸಿ ವಿಜಯಕುಮಾರ್ ಹಾಗೂ ಅವರ ಸಹೋದರ ದಿನೇಶ್ ಅವರ ಮೇಲೆ ಮತಾಂತರದ ಆರೋಪ ಹೊರಿಸಿ ಕೂಡಿಗೆ ಹಾಗೂ ಕುಶಾಲನಗರದ ಕೆಲವು ಆರ್‍ಎಸ್‍ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ದಿನೇಶ್ ಹಾಗೂ ಸ್ಥಳೀಯ ನಿವಾಸಿಗಳು ಕಳೆದ 6 ವರ್ಷಗಳಿಂದ ಸಾಮೂಹಿಕ ಪ್ರಾರ್ಥನೆ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡಿದ್ದಾರೆ ಹೊರತು ಯಾವದೇ ರೀತಿಯ ಮತಾಂತರ ಗೊಳಿಸುವ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಆದರೆ ಸತ್ಯಾಂಶ ತಿಳಿಯದೆ ಕೆಲವರು ಏಕಾಏಕಿ ಮನೆಗೆ ನುಗ್ಗಿ ಪ್ರಾರ್ಥನೆಯಲ್ಲಿ ತೊಡಗಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮನೆಯೊಳಗಿನ ಕೊಠಡಿಗಳನ್ನು ಪ್ರವೇಶಿಸಿ ಕುಟುಂಬ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಉಪ ಅಧೀಕ್ಷಕರಿಗೆ ದೂರು ನೀಡಲಾಗಿದ್ದರೂ ಇದುವರೆಗೆ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಕೂಡಲೆ ತಪಿತಸ್ಥರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕಿದೆ. ಇಲ್ಲದಿದ್ದಲ್ಲಿ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವದು ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ವಿಜಯಕುಮಾರ್, ಚಂದನ್, ಆದರ್ಶ ಇದ್ದರು.