ಸೋಮವಾರಪೇಟೆ, ಅ.9: ಮದ್ಯ ಸೇವನೆಗೆಂದು ಬಾರ್ಗೆ ಆಗಮಿಸಿದ ಎರಡು ತಂಡಗಳ ನಡುವೆ ತಡರಾತ್ರಿ ಮಾರಾಮಾರಿ ನಡೆದು, ಇನ್ನೋವಾ ವಾಹನ ಜಖಂಗೊಂಡಿದ್ದರೆ, ಎರಡೂ ತಂಡಗಳಲ್ಲಿ ಗಾಯಗೊಂಡವರು ಪೊಲೀಸ್ ದೂರು ನೀಡದೇ ತೆರಳಿರುವ ಘಟನೆ ನಡೆದಿದೆ.
ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಕನ್ನಡಾಂಬೆ ವೃತ್ತದ ಬಳಿಯ ಬಾರ್ಗೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಆಗಮಿಸಿದ ಐಗೂರು ಮತ್ತು ಸುಂಟಿಕೊಪ್ಪದ ಕೆಲ ಯುವಕರನ್ನು ಒಳಗೊಂಡ ತಂಡ ಹಾಗೂ ಪಟ್ಟಣ ಮತ್ತು ಹಾನಗಲ್ಲು ಗ್ರಾಮದ ಕೆಲ ಯುವಕರನ್ನು ಒಳಗೊಂಡ ತಂಡದ ನಡುವೆ ಘರ್ಷಣೆ ನಡೆದಿದೆ.
ಘರ್ಷಣೆಯ ವೀಡಿಯೋ ಚಿತ್ರೀಕರಣ ಬಾರ್ನಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಐಗೂರಿನ ಯುವಕ ಮತ್ತು ಪಟ್ಟಣದ ಜನತಾ ಕಾಲೋನಿ ಯುವಕನ ನಡುವೆ ಹಳೆ ವೈಷಮ್ಯವಿದ್ದು, ನಿನ್ನೆ ರಾತ್ರಿ ಮದ್ಯ ಸೇವನೆಗಾಗಿ ಈರ್ವರು ಯುವಕರು ತಮ್ಮ ತಂಡದೊಂದಿಗೆ ಬಾರಿಗೆ ಆಗಮಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಎರಡೂ ತಂಡಗಳ ನಡುವೆ ಘರ್ಷಣೆ ಸಂಭವಿಸಿದೆ. ನಂತರ ಜನತಾ ಕಾಲೋನಿ ಯುವಕನ ತಂಡದವರು ಐಗೂರು ಯುವಕ ಆಗಮಿಸಿದ್ದ ಇನ್ನೋವಾ ವಾಹನದ ಗಾಜುಗಳು, ಸೇರಿದಂತೆ ವಾಹನದ ಕೆಲಭಾಗಗಳನ್ನು ಜಖಂಗೊಳಿಸಿದ್ದಾರೆ.
ಗಲಾಟೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿದ ಸಂದರ್ಭ ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಘರ್ಷಣೆಯಿಂದ ಗಾಯಗೊಂಡಿದ್ದ ಈರ್ವರು ಮಡಿಕೇರಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಪೊಲೀಸರು ಆಸ್ಪತ್ರೆಗೆ ತೆರಳುವ ಮುನ್ನವೇ ಅಲ್ಲಿಂದ ಹೊರಬಂದಿದ್ದಾರೆ.
ಘರ್ಷಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಗಲಭೆಕೋರರು ಯಾರೂ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ಯಾರೂ ಸಹ ದೂರು ನೀಡಿಲ್ಲ. ಸ್ಥಳದಲ್ಲಿದ್ದ ದ್ವಿಚಕ್ರವಾಹನ ವೊಂದನ್ನು ಠಾಣೆಗೆ ತರಲಾಗಿದೆ. ಯಾರಿಂದಲೂ ದೂರು ಬಾರದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಕೆಲ ದಿನಗಳಿಂದ ಸಮಾಜಘಾತುಕ ಶಕ್ತಿಗಳ ಹೊೈ ಕೈ ಪ್ರಾರಂಭವಾಗಿದೆ. ಗುಂಪು ಕಟ್ಟಿಕೊಂಡು ಹೊಡೆದಾಡಿಕೊಳ್ಳುವದು. ಕಬ್ಬಿಣದ ರಾಡ್ ಸೇರಿದಂತೆ ಇನ್ನಿತರ ಮಾರಕಾಯುಧಗಳಿಂದ ಹಲ್ಲೆ ನಡೆಸುವದು. ಕೆಲವೊಮ್ಮೆ ಜಾತಿಗಳ ನಡುವಿನ ಸಂಘರ್ಷ ಎಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇಂತಹ ಶಕ್ತಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.