ಸುಂಟಿಕೊಪ್ಪ, ಅ. 9 : ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಕೋಳಿ ಅಂಗಡಿಯಿಂದ ಗ್ರಾಹಕರು ಖರೀದಿಸಿದ ಕೋಳಿ ಮಾಂಸದಲ್ಲಿ ಹುಳ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರಿಗೆ ಪುಕಾರು ನೀಡಲಾಗಿದೆ.

ಸಂತೆ ದಿನವಾದ ಭಾನುವಾರ ಉಲುಗುಲಿ ತೋಟದ ಕಾರ್ಮಿಕ ರವಿ ಮತ್ತು ಮೋಹನ ಅಂಜು ಎಂಬವರ ಮಳಿಗೆಯಿಂದ 1 ಕೆ.ಜಿ. ಕೋಳಿ ಮಾಂಸ ಖರೀದಿಸಿದ್ದರು, ಅವರು ಕೋಳಿ ಮಾಂಸವನ್ನು ಮನೆಗೆ ಕೊಂಡ್ಯೊಯ್ದು ನೋಡಿದಾಗ ಅದರಲ್ಲಿ ಹುಳ ಪತ್ತೆಯಾಗಿದೆ. ವಾಪಸು ಕೋಳಿ ಮಾಂಸವನ್ನು ತಂದು ಅಂಗಡಿಗೆ ನೀಡಿದಾಗ ಆತ ಉಡಾಫೆಯ ಉತ್ತರ ನೀಡಿ, ತಿರಸ್ಕಾರ ಮಾಡಿದ ಎನ್ನಲಾಗಿದೆ.

ಈ ಬಗ್ಗೆ ಸುಂಟಿಕೊಪ್ಪ ಪೊಲೀಸರಿಗೆ ರವಿ ಮತ್ತು ಮೋಹನ ಹುಳ ಇರುವ ಕೋಳಿ ಮಾಂಸವನ್ನು ಪ್ರದರ್ಶಿಸಿ ದೂರು ನೀಡಿದರು. ಠಾಣಾಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಕರೆಯಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಈಗಾಗಲೇ ಪಂಚಾಯಿತಿಯಿಂದ ಪರವಾನಗಿ ಪಡೆದಿರುವ ಮಾಂಸದ ಅಂಗಡಿಯವರಿಗೆ ಉತ್ತಮ ಗುಣಮಟ್ಟದ, ಶುಚಿತ್ವದಿಂದ ಕೂಡಿದ ಮಾಂಸ ಮಾರಾಟ ಮಾಡಲು ಸೂಚಿಸಿದ್ದೇನೆ ಆದರೂ ಹೀಗಾಗಿದ್ದು ವಿಷಾದನಿಯ ಎಂದು ಅವರು ಹೇಳಿದರು.

ಉತ್ತಮ ಗುಣಮಟ್ಟದ ಶುಚಿತ್ವದಿಂದ ಮಾಂಸ ಮಾರಾಟ ಮಾಡುವಂತೆ ಠಾಣಾಧಿಕಾರಿ ಜಯರಾಂ ಕೋಳಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.