ಕೂಡಿಗೆ, ಸೆ. 28: ಹಾರಂಗಿ ಅಣೆಕಟ್ಟೆಯಿಂದ ಕೊಡಗು ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಯ ಆರು ತಾಲೂಕುಗಳಲ್ಲಿ ಬೇಸಾಯಕ್ಕೆ ಅನುಕೂಲವಾಗುವಂತೆ ಹಾರಂಗಿ ಅಣೆಕಟ್ಟೆಯಿಂದ ನೀರನ್ನು ಹರಿಬಿಡಲಾಗುತ್ತಿದ್ದು, ಪ್ರಸಕ್ತ ಸ್ಥಗಿತಗೊಳಿಸಲಾಗಿದೆ.

ಇದೀಗ ನಾಲೆಗೆ 200 ಕ್ಯೂಸೆಕ್ ನಷ್ಟು ಹರಿಯುತ್ತಿದ್ದ ನೀರು ಇಂದು ಹರಿಯದಂತೆ ಸಂಪೂರ್ಣ ಸ್ಥಗಿತಗೊಳಿಸಿ, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ನಿನ್ನೆ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನದಂತೆ ನಾಲೆಯಲ್ಲಿ ಇಂದು ಸಂಪೂರ್ಣವಾಗಿ ನೀರನ್ನು ಸ್ಥಗಿತಗೊಳಸಲಾಗಿದೆ.

ಒಳಹರಿವು 600 ಕ್ಯೂಸೆಕ್ ನೀರು ಇದ್ದು, ಅಣೆಕಟ್ಟೆಗೆ ಬಂದ ಹೆಚ್ಚುವರಿಗೆ 600 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ ಎಂದು ಹಾರಂಗಿ ಅಣೆಕಟ್ಟೆಯ ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ತಿಳಿಸಿದ್ದಾರೆ.

ರೈತರ ಆಕ್ರೋಶ : ಹಾರಂಗಿ ಜಲಾಶಯದಿಂದ ನಾಲೆಗೆ ನೀರು ಬಿಡದೆ ರೈತರು ಮುಂಗಾರು ಬೆಳೆಯಲ್ಲಿ ವ್ಯತ್ಯಯ ಎದುರಿಸುವಂತಾಗಿದೆ ಎಂದು ‘ಶಕ್ತಿ’ಯೊಂದಿಗೆ ಸಂಬಂಧಪಟ್ಟವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಈಗಷ್ಟೇ ನಾಟಿ ಕಾರ್ಯ ಕೈಗೊಂಡಿದ್ದು, ನೀರು ಬಿಡದೆ ಭತ್ತ ನಾಟಿ ಸಹಿತ ಕೃಷಿಗೆ ಹಾನಿಯಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕೆ.ಕೆ. ನಾಗರಾಜಶೆಟ್ಟಿ / ಚಿತ್ರ ಟಿ.ಜಿ. ಸತೀಶ್