ಸೋಮವಾರಪೇಟೆ, ಸೆ. 28: ಶ್ರದ್ಧಾಭಕ್ತಿಯ ನವರಾತ್ರಿಯ ಸಂಭ್ರಮ ಸೋಮವಾರಪೇಟೆಯಲ್ಲಿ ಕಂಡು ಬರುತ್ತಿದ್ದು, ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಶಕ್ತಿಪಾರ್ವತಿ ಸನ್ನಿದಿಯಲ್ಲಿ ಉತ್ಸವ ಮೂರ್ತಿಗೆ ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಇದರೊಂದಿಗೆ ನಾಡಿನೆಲ್ಲೆಡೆ ನವದುರ್ಗೆಯರ ಆರಾಧನೆ ಶ್ರದ್ಧಾ ಭಕ್ತಿಗಳಿಂದ ನಡೆಯುತ್ತಿದೆ. ಸೋಮೇಶ್ವರ ದೇವಾಲಯದಲ್ಲಿ ಇಂದು ವಿಶೇಷ ಪೂಜೆ, ಹೋಮಗಳು ನಡೆದವು. ನೂರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಗರಗಂದೂರು ಗ್ರಾಮದ ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ ಹಾಗೂ ಶಾರದಮ್ಮ ದಂಪತಿಗಳು ತಮ್ಮ ಮನೆಯಲ್ಲಿ ನವದುರ್ಗೆಯರ ಮೂರ್ತಿಯನಿಟ್ಟು ಆರಾಧಿಸುತ್ತಿದ್ದಾರೆ. ದೇವಿದುರ್ಗೆ, ಲಕ್ಷ್ಮಿ, ಸರಸ್ವತಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಆ ಮೂಲಕ ಸನ್ಮಂಗಳಕ್ಕಾಗಿ ಪ್ರಾರ್ಥಿಸಲಾಗುತ್ತದೆ ಎಂದು ಶಾರದಮ್ಮ ಅಭಿಪ್ರಾಯಿಸುತ್ತಾರೆ.

ಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಶ್ಮಾಂಡ, ಸ್ಕಂದಮಾತ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿರಾತ್ರಿ ಎಂಬ ದೇವಿಯ ಒಂಬತ್ತು ಅವತಾರಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜಿಸಲಾಗುತ್ತಿದ್ದು, 10ನೇ ದಿನವಾದ ವಿಜಯದಶಮಿಯಂದು ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಪೂಜೆಯನ್ನು ಅಂತ್ಯಗೊಳಿಸಿ ದೇವಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.