ಮಡಿಕೇರಿ, ಸೆ. 14: ಸ್ವಾಮಿ ವಿವೇಕಾನಂದರ ಆದರ್ಶಗಳಾದ ದೇಶಭಕ್ತಿ, ದೇಶ ಸೇವೆ, ದೀನರ ಬಗ್ಗೆ ಕಾಳಜಿ, ವಿಶ್ವ ಸಹೋದರತೆ, ಧಾರ್ಮಿಕ ಸಹಿಷ್ಣುತೆ ಹಾಗೂ ವೈಚಾರಿಕತೆ ಆಧುನಿಕ ಕಾಲದಲ್ಲಿ ಅನುಕರಣೆಗೆ ಅರ್ಹವಾಗಿದೆ ಎಂದು ಪೊನ್ನಂಪೇಟೆಯ ಜ್ಞಾನವಾಹಿನಿ ಕೇಂದ್ರದ ಸಂಚಾಲಕಿ ಮಾತೃಶ್ರೀ ಸುಂದರಿ ಅಭಿಪ್ರಾಯಪಟ್ಟರು.

ಸಮೀಪದ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಚಿಕಾಗೋ ಭಾಷಣದ 125ನೇ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿವೇಕ ವಾಣಿಗಳು ಯುವಜನತೆಗೆ ಸ್ಪೂರ್ತಿಯ ಚಿಲುಮೆಯಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ವಿವೇಕಾ ನಂದರ ಅದರ್ಶಗಳನ್ನು ಮೈಗೂಡಿಸಿ ಕೊಂಡು ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿ ಕರೆ ನೀಡಿದರು. ಇದೇ ಸಂದರ್ಭ ಜ್ಞಾನ ವಾಹಿನಿ ಕೇಂದ್ರದ ಮುಖಾಂತರ ವಿವೇಕಾನಂದರ ಸಂದೇಶ ವನ್ನೊಳಗೊಂಡ ಪುಸ್ತಕಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜ್ಞಾನ ವಾಹಿನಿ ಕೇಂದ್ರದ ಕಾರ್ಯಕರ್ತೆ ಶಾರದ ಚಂದ್ರಶೇಖರ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು ಹಾಜರಿದ್ದರು. ಪ್ರಾಚಾರ್ಯೆ ಡಾ. ಕೆ.ಎಂ. ಭವಾನಿ ಸ್ವಾಗತಿಸಿದರು. ಉಪನ್ಯಾಸಕ ಪಿ.ಆರ್. ಶಿವದಾಸ್ ವಂದಿಸಿದರು.