ವೀರಾಜಪೇಟೆ, ಸೆ. 14: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಆರ್ಜಿ ಗ್ರಾಮದ ಕಸವಿಲೇವಾರಿ ಕೇಂದ್ರದ ಕಬ್ಬಿಣದ ಗೇಟ್‍ಗೆ ಹಾಕಿದ್ದ ಬೀಗ ಮುರಿದು ಅಕ್ರಮ ಪ್ರವೇಶ ಮಾಡಿ ಕೊಳೆತು ನಾರುತ್ತಿದ್ದ ಆಹಾರ ಪದಾರ್ಥಗಳು ತ್ಯಾಜ್ಯ ಹಾಗೂ ಒಣ ಕಸದ ಬಾಕ್ಸ್‍ಗಳನ್ನು ಹಾಕಲಾಗಿದೆ ಎಂದು ಮುಖ್ಯಾಧಿಕಾರಿ ನಗರ ಪೊಲೀಸರಿಗೆ ಲಿಖಿತ ದೂರಿನ ಮೇರೆ ಪೊಲೀಸರು ಮಹೇಂದ್ರ ಕ್ಲಬ್ ರೆಸಾರ್ಟ್‍ನ ಕಸ ವಿಲೇವಾರಿ ಘಟಕದ ಸಿಬ್ಬಂದಿ ವಿರುದ್ಧ ಅನುಮಾನಾಸ್ಪದ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ತಾ. 6ರಂದು ಈ ಘಟನೆ ನಡೆದಿದ್ದು ಕೇಂದ್ರದ ಒಳಗೆ ತ್ಯಾಜ್ಯವನ್ನು ಸುರಿಯಲಾಗಿದೆ. ಈ ಪೈಕಿ ಒಣ ಕಸವನ್ನು ಪರಿಶೀಲಿಸಿದಾಗ ಕ್ಲಬ್ ಮಹೇಂದ್ರ ರೆಸಾರ್ಟ್ ಬಿಲ್‍ಗಳು, ರಶೀತಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಹೇಂದ್ರ ರೆಸಾರ್ಟ್ ಈ ಕೃತ್ಯ ಎಸಗಿರುವದಾಗಿ ಗೊತ್ತಾಗಿದೆ.

ಆರ್ಜಿ ಗ್ರಾಮಸ್ಥರು ಕಸ ವಿಲೇವಾರಿ ವಿರುದ್ದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಸ ವಿಲೇವಾರಿ ಕೇಂದ್ರವನ್ನು ಪರಿಶೀಲಿಸಿದಾಗ ರೆಸಾರ್ಟ್‍ಗೆ ಸೇರಿದ ಅತಿ ದುರ್ನಾತ ದಿಂದ ಕೂಡಿದ ತ್ಯಾಜ್ಯ ಬಹಿರಂಗ ವಾಗಿ ಹಾಕಿರುವದು ಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ತಾ. 8ರಂದು ಪಟ್ಟಣ ಪಂಚಾಯಿತಿ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದು ಕಸ ವಿಲೇವಾರಿ ಕೇಂದ್ರದ ತ್ಯಾಜ್ಯವನ್ನು ಖುದ್ದು ಪರಿಶೀಲಿಸಿದ ನಂತರ ರೆಸಾರ್ಟ್ ಕಸ ವಿಲೇವಾರಿ ಘಟಕದ ಸಿಬ್ಬಂದಿಗಳ ವಿರುದ್ದ ಐ.ಪಿ.ಸಿ 447, 269 ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ತಾ. 6ರಂದು ಎರಡು ಪಿಕ್ ಅಪ್ ಜೀಪ್‍ನಲ್ಲಿ ಕಸ ಈ ಕೇಂದ್ರಕ್ಕೆ ಕಡಂಗದ ಪಾಲಂಗಾಲದಿಂದ ಬಂದಿರುವದಾಗಿ ಪೊಲೀಸರಿಗೆ ತಡವಾಗಿ ಮಾಹಿತಿ ದೊರೆತಿರುವದಾಗಿ ಹೇಳಲಾಗಿದೆ.