ಸುಂಟಿಕೊಪ್ಪ, ಸೆ. 13: ತಮಿಳುನಾಡಿನಲ್ಲಿ ರಾಜಕೀಯ ಮೇಲಾಟ ಹಿನ್ನೆಲೆ, ಇಲ್ಲಿಗೆ ಸಮೀಪದ 7ನೇ ಹೊಸಕೋಟೆಯ ತೊಂಡೂರುವಿನಲ್ಲಿರುವ ಪಾಡಿಂಗ್ ಟನ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು, ತಮಗೆ ಪೊಲೀಸ್ ರಕ್ಷಣೆ ಕೋರಿ ಸುಂಟಿಕೊಪ್ಪ ಠಾಣೆಯಲ್ಲಿ ಮನವಿ ಸಲ್ಲಿಸಿದ್ದಾರೆ.ಆ ಮೇರೆಗೆ ಡಿವೈಎಸ್‍ಪಿ ಸಂಪತ್ ಅವರು ಮನವಿ ಅರ್ಜಿ ಸ್ವೀಕರಿಸಿ, ಪರಿಶೀಲನೆಯ ಭರವಸೆ ನೀಡಿರುವದಾಗಿ ಗೊತ್ತಾಗಿದೆ. ತಮಿಳುನಾಡು ಶಾಸಕ ಸೆಂದಿಲ್ ಬಾಲಾಜಿ ಹಾಗೂ ಇತರ ಮೂವರು ಈ ಸಂಜೆ ಸುಂಟಿಕೊಪ್ಪ ಠಾಣೆಗೆ ಬಂದು ತಮ್ಮ ವಕೀಲರ ಮೂಲಕ, ತಮಿಳುನಾಡು ಪೊಲೀಸರಿಂದ ಕಿರುಕುಳದ ಆತಂಕ ತೋಡಿಕೊಂಡಿದ್ದಾರೆ.

ಈ ಬಗ್ಗೆ ರೆಸಾರ್ಟ್ ಮಾಲೀಕರಿಗೆ ರಕ್ಷಣೆ ನೀಡುವಂತೆ ಸೂಚಿಸಲಾಗುವದು ಎಂದು ಸಮಜಾಯಿಷಿ ನೀಡಿರುವ ಕೊಡಗು ಪೊಲೀಸರು, ಅಗತ್ಯವಿದ್ದರೆ ಸಂಬಂಧಿಸಿದ ಶಾಸಕರನ್ನು ಇರಿಸಿಕೊಂಡಿರುವ ರೆಸಾರ್ಟ್ ಮಾಲೀಕರು ಇಲಾಖೆಗೆ ಶುಲ್ಕ ಪಾವತಿಸಿ ರಕ್ಷಣಾ ವ್ಯವಸ್ಥೆ ಪಡೆದುಕೊಳ್ಳುವಂತೆ ತಿಳಿ ಹೇಳಿರುವದಾಗಿ ಮೂಲಗಳಿಂದ ಗೊತ್ತಾಗಿದೆ.ಅಲ್ಲದೆ, ತಮಿಳುನಾಡು ಪೊಲೀಸರು ಅಪರಾಧ ಪ್ರಕರಣವೊಂದರ ಸಂಬಂಧ ಹುಡುಕುತ್ತಿರುವ ಶಾಸಕ ಪಳನಿಯಪ್ಪ ತಾ. 10 ರಂದು ರೆಸಾರ್ಟ್‍ಗೆ ಬಂದಿದ್ದು, ಮರುದಿನ ಅಲ್ಲಿಂದ ನಿರ್ಗಮಿಸಿರುವ ಸುಳಿವು ಲಭಿಸಿದೆ. ಈ ಶಾಸಕನನ್ನು ಇದೀಗ ತಮಿಳುನಾಡಿನಲ್ಲಿ ಬಂಧಿಸಿರುವ ಮಾಹಿತಿ ದೊರೆತಿರುವದಾಗಿ ಪೊಲೀಸ್ ಮೂಲಗಳು ದೃಢಪಡಿಸಿವೆ. - ರಾಜು ರೈ